ADVERTISEMENT

ಎಎಪಿ ವಿರುದ್ಧ ಆಂದೋಲನದಲ್ಲಿ ಭಾಗವಹಿಸಲು ಬಿಜೆಪಿ ಮನವಿ: ಏನಂದ್ರು ಅಣ್ಣಾ ಹಜಾರೆ?

ಪಿಟಿಐ
Published 29 ಆಗಸ್ಟ್ 2020, 2:26 IST
Last Updated 29 ಆಗಸ್ಟ್ 2020, 2:26 IST
ಅಣ್ಣಾ ಹಜಾರೆ (ಸಂಗ್ರಹ ಚಿತ್ರ)
ಅಣ್ಣಾ ಹಜಾರೆ (ಸಂಗ್ರಹ ಚಿತ್ರ)   

ನವದೆಹಲಿ: ಎಎಪಿ ಸರ್ಕಾರದ ವಿರುದ್ಧದ ಆಂದೋಲನದಲ್ಲಿ ಭಾಗವಹಿಸುವಂತೆ ಬಿಜೆಪಿಯ ದೆಹಲಿ ಘಟಕ ಮಾಡಿರುವ ಮನವಿಯನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿರಸ್ಕರಿಸಿದ್ದಾರೆ. ತನ್ನದೇ ಆದ ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಹೊಂದಿರುವ ಕೇಂದ್ರದಲ್ಲಿಯೂ ಅಧಿಕಾರದಲ್ಲಿರುವ ಪಕ್ಷವೊಂದು ಆಂದೋಲನಕ್ಕೆ ತಮ್ಮನ್ನು ಆಹ್ವಾನಿಸಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ತಾವು ದೆಹಲಿಗೆ ಹೋಗುವುದರಿಂದ ಯಾವುದೇ ವ್ಯತ್ಯಾಸವಾಗಲಾರದು. ಯಾಕೆಂದರೆ ಯಾವುದೇ ರಾಜಕೀಯ ಪಕ್ಷವು ದೇಶಕ್ಕೆ ಉಜ್ವಲ ಭವಿಷ್ಯ ನೀಡುತ್ತದೆ ಎಂಬ ನಂಬಿಕೆ ತಮಗಿಲ್ಲ ಎಂಬುದನ್ನು ಬಿಜೆಪಿಯ ದೆಹಲಿ ಮುಖ್ಯಸ್ಥ ಆದೇಶ್ ಗುಪ್ತಾ ಅವರಿಗೆ ಬರೆದ ಪತ್ರದಲ್ಲಿ ಹಜಾರೆ ಉಲ್ಲೇಖಿಸಿದ್ದಾರೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿರುದ್ಧ ನಡೆಸುವ ಆಂದೋಲನದಲ್ಲಿ ಭಾಗಿಯಾಗುವಂತೆ ಮನವಿ ಮಾಡಿ ಗುಪ್ತಾ ಅವರು ಕಳೆದ ಸೋಮವಾರ ಹಜಾರೆಗೆ ಪತ್ರ ಬರೆದಿದ್ದರು. ಎಎಪಿ ಸರ್ಕಾರವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭ್ರಷ್ಟಾಚಾರದ ಹೊಸ ಹೆಸರು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಬಿಜೆಪಿಯಲ್ಲೇ ವಿರೋಧ: ಹಜಾರೆ ಅವರಿಗೆ ಪತ್ರ ಬರೆಯುವ ಮೂಲಕ ಆದೇಶ್ ಗುಪ್ತಾ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ ಎಂದು ಪಕ್ಷದ ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ. ‘ಇದಕ್ಕಿಂತ ದೊಡ್ಡ ಮುಜುಗರವೇನಿದೆ. ಹಜಾರೆ ಅವರಿಗೆ ಪತ್ರ ಬರೆಯುವ ಮುನ್ನ ಗುಪ್ತಾ ಪಕ್ಷದ ಹಿರಿಯ ನಾಯಕರ ಬಳಿ ಚರ್ಚಿಸಿಲ್ಲವೆಂದು ಭಾವಿಸುತ್ತೇನೆ’ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಈ ಮಧ್ಯೆ, ಹಜಾರೆ ಪತ್ರಕ್ಕೆ ಪ್ರತಿಕ್ರಿಯಿಸಿರುವ ಗುಪ್ತಾ, ‘ದೆಹಲಿ ಬಿಜೆಪಿಯು ಪ್ರಬಲ ಸಂಘಟನಾ ಶಕ್ತಿ ಹೊಂದಿದೆ. ಎಲ್ಲ ರೀತಿಯ ಬೃಹತ್ ಆಂದೋಲನಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಆದರೆ, ಸಾಮಾಜಿಕ ಹೋರಾಟಗಾರರ ಸಾಂಕೇತಿಕ ಉಪಸ್ಥಿತಿಯನ್ನಷ್ಟೇ ಬಯಸಲಾಗಿತ್ತು. ಯಾಕೆಂದರೆ ಹಜಾರೆ ಅವರ ಆಂದೋಲನದಿಂದಲೇ ಎಎಪಿ ಉದಯಿಸಿತ್ತು’ ಎಂದು ಹೇಳಿದ್ದಾರೆ.

2011ರಲ್ಲಿ ದೆಹಲಿಯ ರಾಮ್‌ಲೀಲಾ ಮೈದಾನದಿಂದ ಅಣ್ಣಾ ಹಜಾರೆ ಪ್ರಾರಂಭಿಸಿದ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಕೇಜ್ರಿವಾಲ್ ಅವರು ಮುಂಚೂಣಿ ನಾಯಕರಾಗಿದ್ದರು. ನಂತರ, ಕೇಜ್ರಿವಾಲ್ ಮತ್ತವರ ಬೆಂಬಲಿಗರು ಸಕ್ರಿಯ ರಾಜಕೀಯಕ್ಕೆ ಹೊರಳಿ ಎಎಪಿ ಪಕ್ಷ ಸ್ಥಾಪಿಸಿದರು. ಇದು ದೆಹಲಿಯಲ್ಲಿ ಮೂರು ಬಾರಿ ಸರ್ಕಾರ ರಚಿಸಿದೆ. ಮತ್ತು ಪಂಜಾಬ್ ವಿಧಾನಸಭೆಯಲ್ಲಿ ಮುಖ್ಯ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.