ADVERTISEMENT

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2026, 14:59 IST
Last Updated 3 ಫೆಬ್ರುವರಿ 2026, 14:59 IST
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ    

ತಮಿಳುನಾಡಿನ 6 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳ ಬಳಿಕ ಕೆ. ಅಣ್ಣಾಮಲೈ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.

ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ತಮ್ಮ ತಂದೆಯ ಅನಾರೋಗ್ಯದ ಕಾರಣ ನೀಡಿ ಮಂಗಳವಾರ ತಮಗೆ ನೀಡಿದ್ದ ಜವಾಬ್ದಾರಿಯಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ. ತಂದೆಯ ಆರೈಕೆಗಾಗಿ ಕೊಯಮತ್ತೂರಿನಲ್ಲಿ ಇರಬೇಕಾಗಿರುವುದರಿಂದ ಚುನಾವಣಾ ಕೆಲಸದ ಜವಾಬ್ದಾರಿಯನ್ನು ನಿರಾಕರಿಸಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.

'ನನ್ನ ತಂದೆ ಅಸ್ವಸ್ಥರಾಗಿದ್ದಾರೆ ಮತ್ತು ನಾನು ಅವರನ್ನು ನೋಡಿಕೊಳ್ಳಬೇಕು. ಹಾಗಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೈಕಮಾಂಡ್‌ಗೆ ತಿಳಿಸಿದ್ದೇನೆ. ನನ್ನ ತಂದೆಯನ್ನು ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ. ನೀವು ನನ್ನನ್ನು ಕೊಯಮತ್ತೂರಿನಲ್ಲಿ ಆಗಾಗ ನೋಡುತ್ತೀರಿ’ ಎಂದು ಅಣ್ಣಾಮಲೈ ತಿಳಿಸಿದ್ದಾರೆ

ADVERTISEMENT

ಆದರೆ, ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಕೇವಲ 6 ಸ್ಥಾನಗಳಿಗೆ ಸೀಮಿತಗೊಳಿಸಿದ್ದಕ್ಕಾಗಿ ರಾಜ್ಯ ನಾಯಕತ್ವದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಬಳಿಕ ಬಿಜೆಪಿ ಅವರನ್ನು ಕಡೆಗಣಿಸಿತ್ತು. ಡಿಸೆಂಬರ್‌ನಲ್ಲಿ ಬಿಜೆಪಿ ಕೇಂದ್ರ ನಾಯಕರು ಎಎಂಎಂಕೆಯ ಟಿಟಿವಿ ದಿನಕರನ್ ಅವರನ್ನು ಎನ್‌ಡಿಎ ಒಕ್ಕೂಟಕ್ಕೆ ಮರಳಿ ತರಲು ಚಿಂತನೆ ನಡೆಸಿದ್ದರು.

ಅದಾದ ಬಳಿಕ ರಾಜ್ಯ ಘಟಕ ಆಯೋಜಿಸುವ ಕಾರ್ಯಕ್ರಮಗಳಿಂದ ಅಣ್ಣಾಮಲೈ ಅವರು ದೂರ ಉಳಿದಿದ್ದರು. ಮಾತ್ರವಲ್ಲ ಬಿಜೆಪಿಯು ಎಐಎಡಿಎಂಕೆ ಜೊತೆ ವ್ಯವಹರಿಸುತ್ತಿರುವ ರೀತಿ ಬಗ್ಗೆಯೂ ಅವರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ತಮಿಳುನಾಡು ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕರಾಗಿರುವ ಅಣ್ಣಾಮಲೈ, ರಾಜ್ಯ ಬಿಜಪಿ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಬಹುತೇಕ ಕಾರ್ಯಕ್ರಮಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.

ಎಐಎಡಿಎಂಕೆ ಬಗ್ಗೆ ಬಿಜೆಪಿ ನಾಯಕರು ಹೊಂದಿರುವ ಮೃದು ಧೋರಣೆಯಿಂದ ಎರಡೂ ದ್ರಾವಿಡ ಪಕ್ಷಗಳನ್ನು ನೇರವಾಗಿ ಎದುರಿಸುತ್ತಾ ಬಂದಿರುವ ಅಣ್ಣಾಮಲೈ ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಅಣ್ಣಾಮಲೈ ಅವರನ್ನು ಕೇವಲ 6 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯಾಗಿ ನೇಮಿಸಿರುವುದು ನ್ಯಾಯಯುತವಲ್ಲ. ಅವರನ್ನು ರಾಜ್ಯಾದ್ಯಂತ ಬಳಸಿಕೊಳ್ಳಬೇಕು’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.