ADVERTISEMENT

ಕೇರಳ: ಮತ್ತೊಂದು ರ್‍ಯಾಗಿಂಗ್ ಪ್ರಕರಣ ದಾಖಲು

ಕಿರಿಯ ವಿದ್ಯಾರ್ಥಿಯ ಥಳಿಸಿದ ಏಳು ಹಿರಿಯ ವಿದ್ಯಾರ್ಥಿಗಳು

ಪಿಟಿಐ
Published 18 ಫೆಬ್ರುವರಿ 2025, 12:54 IST
Last Updated 18 ಫೆಬ್ರುವರಿ 2025, 12:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತಿರುವನಂತಪುರ: ಇಲ್ಲಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬರು ತನ್ನ ಮೇಲೆ ಹಿರಿಯ ವಿದ್ಯಾರ್ಥಿಗಳು ಕ್ರೂರವಾಗಿ ರ್‍ಯಾಗಿಂಗ್‌ ನಡೆಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

‘ಏಳು ಹಿರಿಯ ವಿದ್ಯಾರ್ಥಿಗಳ ಗುಂಪು ಫೆಬ್ರುವರಿ 11ರಂದು ನನ್ನ ಮೇಲೆ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ ಬೆದರಿಕೆ ಹಾಕಿದ್ದಾರೆ’ ಎಂದು ನಗರದ ಕಾರ್ಯವಟ್ಟಂ ಸರ್ಕಾರಿ ಕಾಲೇಜಿನ ಬಯೋಟೆಕ್ನಾಲಜಿಯ ಮೊದಲ ವರ್ಷದ ವಿದ್ಯಾರ್ಥಿ ಬಿನ್ಸ್‌ ಜೋಸ್‌ ಹೇಳಿದ್ದಾರೆ. ಈ ಕುರಿತು ಪೊಲೀಸರಿಗೆ ಮತ್ತು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿರುವುದಾಗಿ ಜೋಸ್‌ ತಿಳಿಸಿದ್ದಾರೆ.

ADVERTISEMENT

ಕೋಟಯಂ ನರ್ಸಿಂಗ್‌ ಕಾಲೇಜಿನಲ್ಲಿ ಇತ್ತೀಚಿಗೆ ಕಿರಿಯ ವಿದ್ಯಾರ್ಥಿ ಮೇಲೆ ನಡೆದಿದ್ದ ರ್‍ಯಾಗಿಂಗ್‌ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ರಾಜ್ಯದಲ್ಲಿ ಈ ರೀತಿಯ ಇತರ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಪ್ರಕರಣದ ವಿವರ: ‘ನಾನು ಮತ್ತು ಸ್ನೇಹಿತ ಅಭಿಷೇಕ್‌ ಕಾಲೇಜಿನ ಆವರಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ನಮ್ಮನ್ನು ಅಡ್ಡಗಟ್ಟಿದ ಹಿರಿಯ ವಿದ್ಯಾರ್ಥಿಗಳ ತಂಡವು ನಮ್ಮನ್ನು ಥಳಿಸಲು ಆರಂಭಿಸಿತು. ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದ ನನ್ನ ಸ್ನೇಹಿತ ಪ್ರಾಂಶುಪಾಲರಿಗೆ ಮಾಹಿತಿ ನೀಡಲು ಓಡಿದ’ ಎಂದು ಜೋಸ್‌ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಬಿದಿರಿನ ಕೋಲು ಮತ್ತು ಬೆಲ್ಟ್‌ನಿಂದ ನನ್ನನ್ನು ಹೊಡೆದರು. ಬಳಿಕ ಕೋಣೆಯೊಂದರ ಒಳಗೆ ಕರೆದುಕೊಂಡು ಹೋಗಿ, ನನ್ನ ಅಂಗಿ ಬಿಚ್ಚಿಸಿ ಮಂಡಿಯೂರಿ ಕೂರಿಸಿದರು. ಕುಡಿಯಲು ನೀರು ಕೇಳಿದರೆ, ಅರ್ಧ ಗ್ಲಾಸ್‌ ನೀರಿಗೆ ಎಂಜಲು ಉಗುಳಿ ನೀಡಿದರು’ ಎಂದು ಅವರು ದೂರಿದರು.

‘ಈ ಘಟನೆ ಕುರಿತು ಯಾರಿಗಾದರೂ ಹೇಳಿದರೆ ಇನ್ನೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹಿರಿಯ ವಿದ್ಯಾರ್ಥಿಗಳು ಬೆದರಿಸಿದರು. ಅಲ್ಲದೆ ಈ ಎಲ್ಲದಕ್ಕೂ ನನ್ನ ಸ್ನೇಹಿತನೇ ಕಾರಣ ಎಂಬುದಾಗಿ ದೂರು ನೀಡುವಂತೆ ಅವರು ಒತ್ತಾಯಿಸಿದರು’ ಎಂದು ಅವರು ಹೇಳಿದರು.

ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಕಜಕೂಟಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.