ADVERTISEMENT

ಕೇರಳದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ; ಮಹಿಳಾ ಹಿರಿಯ ನಾಯಕಿ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 12:19 IST
Last Updated 22 ಮಾರ್ಚ್ 2021, 12:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಯನಾಡ್: ಕೇರಳದಲ್ಲಿ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ಬಿದ್ದಿದ್ದು, ಎಐಸಿಸಿ ಸದಸ್ಯೆ ಮತ್ತು ಕೆಪಿಸಿಸಿ ಉಪಾಧ್ಯಕ್ಷೆ ಕೆ.ಸಿ. ರೋಸಾಕುಟ್ಟಿ ಅವರು ಸೋಮವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಆಡಳಿತಾರೂಢ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಜೊತೆ ಒಡನಾಟ ಹೊಂದಲು ನಿರ್ಧರಿಸಿದ್ದಾರೆ.

'ಸುದೀರ್ಘ ಚರ್ಚೆಗಳ ನಂತರ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ, ಪಕ್ಷದಲ್ಲಿನ ಬಣಗಳ ಯುದ್ಧಗಳಿಂದ ನಾನು ಬೇಸರಗೊಂಡಿದ್ದೇನೆ. ಆದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ' ಎಂದು ಹೇಳಿರುವ ರೋಸಾಕುಟ್ಟಿ, ಹಳೆಯ ಪಕ್ಷದೊಂದಿಗಿನ 37 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದ್ದಾರೆ.

ಪಕ್ಷವು ಮಹಿಳೆಯರನ್ನು ಮೂಲೆಗುಂಪು ಮಾಡಿದೆ. ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಏಪ್ರಿಲ್ 6ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೊಲ್ಲಂನಿಂದ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೊದಲು ಬಿಂದು ಕೃಷ್ಣ ಅವರನ್ನು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಬೇಕಾಯಿತು ಎಂದು ದೂರಿದ್ದಾರೆ.

ADVERTISEMENT

ಕೊಟ್ಟಾಯಂ ಜಿಲ್ಲೆಯ ಎಟ್ಟಮನೂರ್‌ನಿಂದ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಪಕ್ಷಕ್ಕೆ ರಾಜೀನಾಮೆ ನೀಡಿ ಕೆಲವು ದಿನಗಳ ಹಿಂದಷ್ಟೇ ಪ್ರತಿಭಟನೆಯಲ್ಲಿ ಬಾಗಿಯಾಗಿದ್ದ ಲತಿಕಾ ಸುಭಾಷ್ ಅವರಿಗೂ ಇದೇ ಸ್ಥಿತಿ ಎದುರಾಗಿತ್ತು. ಕೋಮುವಾದಿ ಪಕ್ಷಗಳನ್ನು ಎದುರಿಸಲು ಕಾಂಗ್ರೆಸ್‌ಗೆ ಜಾತ್ಯತೀತ ನೀತಿಯನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ, ವಿವಿಧ ವಿಷಯಗಳ ಬಗ್ಗೆ ಪಕ್ಷವು ತೆಗೆದುಕೊಂಡ ನಿಲುವಿನಿಂದ ಹಿರಿಯ ನಾಯಕರು ನಿರಾಶೆಗೊಂಡಿದ್ದಾರೆ ಎಂದು ಹೇಳಿದರು.

ಕೇರಳ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ರೋಸಾಕುಟ್ಟಿ 1991-96ರವರೆಗೆ ವಯನಾಡಿನ ಸುಲ್ತಾನ್ ಬತ್ತೇರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.ಆಕೆ ವಯನಾಡಿನ ಕಲ್ಪೆಟ್ಟಾ ಕ್ಷೇತ್ರದಿಂದಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ ಈ ಸ್ಥಾನವನ್ನು ಟಿ. ಸಿದ್ದೀಕಿಗೆ ನೀಡಲಾಯಿತು ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.