ADVERTISEMENT

ಬಂಧಿತರಲ್ಲಿ ವಿದ್ಯಾರ್ಥಿಗಳಿಲ್ಲ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 19:34 IST
Last Updated 17 ಡಿಸೆಂಬರ್ 2019, 19:34 IST
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ. ಆವರಣದಲ್ಲಿ ಹಾನಿಗೊಳಗಾದ ಬೈಕ್
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ. ಆವರಣದಲ್ಲಿ ಹಾನಿಗೊಳಗಾದ ಬೈಕ್   

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ. ಸಮೀಪ ಹಿಂಸಾಚಾರ ನಡೆಸಿದ ಆರೋಪದಲ್ಲಿ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಜಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು.

ಬಂಧನಕ್ಕೊಳಗಾದ ಹತ್ತು ಮಂದಿಯಲ್ಲಿ ಜಾಮಿಯಾ ವಿದ್ಯಾರ್ಥಿಗಳು ಯಾರೂ ಇಲ್ಲ. ಹಿಂಸಾಚಾರದಲ್ಲಿ ಭಾಗಿಯಾದ ಇನ್ನಷ್ಟು ಮಂದಿ ಸಮಾಜಘಾತುಕರನ್ನು ಗುರುತಿಸುವ ಕೆಲಸ ನಡೆದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಹತ್ತು ಮಂದಿಯಲ್ಲಿ ಮೂರು ಮಂದಿ ರೌಡಿ ಶೀಟರ್‌ಗಳು. ಸಿ.ಸಿ.ಟಿ.ವಿ. ದೃಶ್ಯಗಳು ಮತ್ತು ವಿಡಿಯೊ ದೃಶ್ಯಗಳ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ. ಇವರು ಹಿಂಸೆಗೆ ಕುಮ್ಮಕ್ಕು ನೀಡಿದ್ದಲ್ಲದೆ, ಸಾರ್ವಜನಿಕ ಆಸ್ತಿ ನಾಶ ಮಾಡುವಲ್ಲಿ ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ADVERTISEMENT

‘ಸಮಾಜಘಾತುಕ’ರಾದ ಹತ್ತು ಮಂದಿ ಬಂಧನದ ಬಳಿಕ ಜಾಮಿಯಾ ವಿ.ವಿ.ಯಲ್ಲಿ ಪೊಲೀಸರು ಎಸಗಿದ ‘ದೌರ್ಜನ್ಯ’ದ ಬಗ್ಗೆ ಇನ್ನಷ್ಟು ಪ್ರಶ್ನೆಗಳು ಎದ್ದಿವೆ. ‘ಹಿಂಸಾಚಾರದಲ್ಲಿ ಜಾಮಿಯಾ ವಿದ್ಯಾರ್ಥಿಗಳು ಭಾಗಿಯಾಗಿಲ್ಲ ಎಂದಾದರೆ, ದೆಹಲಿಯ ಪೊಲೀಸರು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅವರು ವಿ.ವಿ. ಆವರಣಕ್ಕೆ ನುಗ್ಗಿದ್ದು ಯಾಕೆ? ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು ಯಾಕೆ’ ಎಂದು ಎಎಪಿ ನಾಯಕಿ ಆತಿಶಿ ಪ್ರಶ್ನಿಸಿದ್ದಾರೆ.

ಹೊರಗಿನವರು ಎಂದು ಪೊಲೀಸರು ಹೇಳುತ್ತಿರುವವರು ಆರ್‌ಎಸ್‌ಎಸ್‌ ಸದಸ್ಯರು ಎಂದು ಸಿಪಿಐ (ಎಂಎಲ್‌) ಪಾಲಿಟ್‌ ಬ್ಯೂರೊ ಸದಸ್ಯೆ ಕವಿತಾ ಕೃಷ್ಣನ್‌ ಅವರು ಆರೋಪಿಸಿದ್ದಾರೆ. ‘ಹೊರಗಿನವರು ಎಂದು ಗುರುತಿಸಿದವರು ಪೊಲೀಸ್‌ ಸಮವಸ್ತ್ರದಲ್ಲಿದ್ದ ಆರ್‌ಎಸ್‌ಎಸ್‌ ಸದಸ್ಯರು ಎಂದು ದೆಹಲಿ ಪೊಲೀಸರು ಹೇಳುತ್ತಿಲ್ಲ. ವಿ.ವಿ. ಆವರಣದಲ್ಲಿ ಗುಂಡು ಹಾರಿಸಿಲ್ಲ ಎಂದೂ ಅವರು ಸುಳ್ಳು ಹೇಳುತ್ತಿದ್ದಾರೆ. ಪೊಲೀಸರ ಕ್ರಮ ಈಗ ತಿರುಗುಬಾಣವಾಗಿದೆ. ಜಾಮಿಯಾ ವಿದ್ಯಾರ್ಥಿಗಳು ಅಮಾಯಕರು ಎಂಬುದು ಗೊತ್ತಾಗಿದೆ. ದೆಹಲಿ ಪೊಲೀಸ್‌ ಆಯುಕ್ತರು ಈಗ ಹೊಸದೊಂದು ಕತೆ ಕಟ್ಟಬೇಕಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.