ADVERTISEMENT

ಹೈಕೋರ್ಟ್‌ ಮಧ್ಯಂತರ ಆದೇಶ ‘ಸುಪ್ರೀಂ’ನಲ್ಲಿ ಪ್ರಶ್ನಿಸಲಿರುವ ಮಧ್ಯಪ್ರದೇಶ ಸರ್ಕಾರ

ಪಿಟಿಐ
Published 20 ನವೆಂಬರ್ 2022, 15:17 IST
Last Updated 20 ನವೆಂಬರ್ 2022, 15:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಬಲ್‌ಪುರ, ಮಧ್ಯಪ‍್ರದೇಶ: ‘ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡದೆ ವಿವಾಹವಾದ ಅಂತರ್‌ಧರ್ಮೀಯ ಜೋಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲಿದೆ’ ಎಂದು ಅಡ್ವೊಕೇಟ್‌ ಜನರಲ್‌ ಪ್ರಶಾಂತ್‌ ಸಿಂಗ್‌ ತಿಳಿಸಿದರು.

ತಮ್ಮ ಸ್ವಂತ ಇಚ್ಛೆಗನುಸಾರ ಮದುವೆಯಾಗುವ ದಂಪತಿ ವಿರುದ್ಧ, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ (ಎಂಪಿಎಫ್‌ಆರ್‌ಎ) ಸೆಕ್ಷನ್‌ 10ರ ಅಡಿ ಕ್ರಮ ಕೈಗೊಳ್ಳಬಾರದೆಂದು ಅಲ್ಲಿನ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿತ್ತು.

‘ಮತಾಂತರವಾಗಬಯಸುವ ವ್ಯಕ್ತಿಯು ಪೂರ್ವಭಾವಿಯಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ತಿಳಿಸಬೇಕು ಎಂದು ಕಡ್ಡಾಯಗೊಳಿಸುವ ಸೆಕ್ಷನ್‌ 10, ನಮ್ಮ ಪ್ರಕಾರ ಅಸಾಂವಿಧಾನಿಕ’ ಎಂದು ನ್ಯಾಯಾಧೀಶರಾದ ಸುಜೊಯ್‌ ಪೌಲ್‌ ಮತ್ತು ಪಿ.ಸಿ. ಗುಪ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ನವೆಂಬರ್‌ 14ರಂದು ಅಭಿಪ್ರಾಯಪಟ್ಟಿತ್ತು.

ADVERTISEMENT

‘ಕೋರ್ಟ್‌ ನೀಡಿರುವ ಮಧ್ಯಂತರ ಆದೇಶವನ್ನುಶೀಘ್ರವೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಅರ್ಜಿ ಸಲ್ಲಿಸಲಾಗುವುದು.ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯು ತಪ್ಪು ಪ್ರಾತಿನಿಧ್ಯ,ಆಮಿಷ, ಬೆದರಿಕೆ, ಅನಗತ್ಯ ಪ್ರಭಾವ, ಬಲವಂತ, ಮದುವೆ ಅಥವಾ ಯಾವುದೇ ಮೋಸದ ವಿಧಾನಗಳಿಂದ ಉಂಟಾಗುವ ಮತಾಂತರಗಳನ್ನು ನಿಷೇಧಿಸುತ್ತದೆ’ ಎಂದುಪ್ರಶಾಂತ್‌ ಸಿಂಗ್‌ ಹೇಳಿದರು.

ಪ್ರಕರಣವೇನು?: 2021ರ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿದ ಏಳು ಅರ್ಜಿಗಳ ಆಧಾರದ ಮೇಲೆ ಹೈಕೋರ್ಟ್‌ ಈ ಮಧ್ಯಂತರ ಆದೇಶ ನೀಡಿತ್ತು. ಈ ಕಾಯ್ದೆಯಡಿಯಲ್ಲಿ ಯಾರನ್ನೂ ವಿಚಾರಣೆಗೆ ಒಳಪಡಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಅರ್ಜಿದಾರರು ಕೋರಿದ್ದರು. ಈ ಅರ್ಜಿಗಳಿಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ಕೋರ್ಟ್‌ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿತ್ತು. ಸರ್ಕಾರದ ಉತ್ತರ ಬಂದ ಬಳಿಕ ಅರ್ಜಿದಾರರು 21 ದಿನಗಳಲ್ಲಿ ಮರುಪರಿಶೀಲನೆಗಾಗಿ ಸಲ್ಲಿಸಬಹುದು ಎಂದು ಕೋರ್ಟ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.