ADVERTISEMENT

ಐತಿಹಾಸಿಕ ಜಾಮೀಯ ಮಸೀದಿಯಲ್ಲಿ ದೇಶವಿರೋಧಿ ಘೋಷಣೆ: 13 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 15:25 IST
Last Updated 9 ಏಪ್ರಿಲ್ 2022, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಇಲ್ಲಿನ ಐತಿಹಾಸಿಕ ಜಾಮೀಯ ಮಸೀದಿಯೊಳಗೆ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ವೇಳೆ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದ ಮೇಲೆ ಶನಿವಾರ ಜಮ್ಮು ಮತ್ತು ಕಾಶ್ಮೀರ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

‘ಬಂಧಿತ ಆರೋಪಿಗಳ ವಿರುದ್ಧ ಐಪಿಸಿ 124 ಎ(ದೇಶದ್ರೋಹ) ಪ್ರಕರಣ ದಾಖಲಿಸಲಾಗಿದ್ದು, ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯೂ ಪ್ರಕರಣ ದಾಖಲಿಸಲಾಗುವುದು’ ಎಂದು ಶ್ರೀನಗರದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಎಸ್‌ಪಿ) ರಾಕೇಶ್‌ ಬಲ್ವಾಲ್‌ ತಿಳಿಸಿದರು.

‘ಜನರನ್ನು ಪ್ರಚೋದಿಸುವ ಮೂಲಕ ಶುಕ್ರವಾರದ ಪ್ರಾರ್ಥನೆಯನ್ನು ಹಾಳು ಮಾಡಲು ಹಾಗೂ ಕಣಿವೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡಿಸಲು ಈ ಆರೋಪಿಗಳು ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳ ನಿರ್ವಾಹಕರ ಸೂಚನೆ ಪಡೆದಿದ್ದರು’ ಎಂದು ರಾಕೇಶ್‌ ಬಲ್ವಾಲ್‌ ಹೇಳಿದರು.

ADVERTISEMENT

’ಏ.8ರ ಮಧ್ಯಾಹ್ನ ಜಾಮಿಯಾ ಮಸೀದಿಯಲ್ಲಿ ನಡೆದ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯಲ್ಲಿ ಸುಮಾರು 24 ಸಾವಿರ ಜನ ಭಾಗವಹಿಸಿದ್ದರು. ಇದು ಇತ್ತೀಚಿನ ಇತಿಹಾಸದಲ್ಲಿ ಅತಿದೊಡ್ಡದು’ ಎಂದು ತಿಳಿಸಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಬಹುತೇಕ ದಿನಗಳು ಜಾಮೀಯ ಮಸೀದಿಯು ಬಂದ್‌ ಆಗಿದ್ದು, 2019ರ ಆಗಸ್ಟ್‌ನಲ್ಲಿ 370 ವಿಧಿ ರದ್ದುಗೊಳಿಸಿದ ಸಂದರ್ಭದಲ್ಲಿ 4 ತಿಂಗಳು ಹಾಗೂ ಕೋವಿಡ್‌ ಸೋಂಕಿನ ಭೀತಿಯಿಂದಾಗಿ 2020ರ ಮಾರ್ಚ್‌ನಿಂದ ಮಸೀದಿಯನ್ನು ಮುಚ್ಚಲಾಗಿತ್ತು. ಇತ್ತೀಚೆಗಷ್ಟೇ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.