ADVERTISEMENT

ಆಂಧ್ರದ ನೇರ ನಗದು ವರ್ಗಾವಣೆ ಯೋಜನೆ: ಅನರ್ಹರ ಪಾಲಾದ ₹700 ಕೋಟಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 18:59 IST
Last Updated 21 ಜುಲೈ 2021, 18:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಮರಾವತಿ: ಆಂಧ್ರಪ್ರದೇಶ ಸರ್ಕಾರವು ಜಾರಿಗೆ ತಂದಿರುವ ವಿವಿಧ ನೇರ ನಗದು ವರ್ಗಾವಣೆ ಯೋಜನೆಗಳ ಹಣದಲ್ಲಿ ₹700 ಕೋಟಿ ಮೊತ್ತವು ಅನರ್ಹರ ಕೈ ಸೇರಿರುವುದು ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರವು 2019ರಜೂನ್‌ ಮತ್ತು 2021ಜೂನ್ ನಡುವೆ ವಿವಿಧ ಉಚಿತ ಯೋಜನೆಗಳ ಅಡಿಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದೆ.

‘ಕೆಲವು ಪ್ರಮುಖ ಯೋಜನೆಗಳನ್ನು ಪರಿಶೀಲನೆ ನಡೆಸುವಾಗ ಫಲಾನುಭವಿಗಳ ದತ್ತಾಂಶದಲ್ಲಿರುವ ಹುಳುಕುಗಳು ಬಹಿರಂಗಗೊಂಡಿವೆ. ಇದು ದೊಡ್ಡ ಮೊತ್ತದ ಹಣ ಅನರ್ಹರ ಖಾತೆಗಳಿಗೆ ಸಂದಾಯವಾಗಿರುವುದನ್ನು ಸೂಚಿಸುತ್ತದೆ’ ಎಂದು ಹಣಕಾಸು ಇಲಾಖೆಯ ಅಧಿಕೃತ ಮೂಲಗಳು ತಿಳಿಸಿವೆ.

ADVERTISEMENT

‘ನಾವು ಈಗಷ್ಟೇ ಪರಿಶೀಲನೆ ಪ್ರಾರಂಭಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ₹3,000 ಕೋಟಿಗೂ ಹೆಚ್ಚು ಹಣ ಸಂಶಯಾಸ್ಪದ ವ್ಯಕ್ತಿಗಳ ಖಾತೆಗೆ ಹೋಗಿರುವ ಅನುಮಾನವಿದೆ’ ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಲಕ್ಷಾಂತರ ಫಲಾನುಭವಿಗಳಿಗೆ ದೊಡ್ಡ ಮೊತ್ತವನ್ನು ನೇರ ನಗದಿನ ರೂಪದಲ್ಲಿ ವರ್ಗಾಯಿಸುವ ವಾರ್ಷಿಕ ಯೋಜನೆಗಳಲ್ಲಿ ಅಮ್ಮ ವೋಡಿ (ಪ್ರತಿ ತಾಯಿಗೆ ₹15,000), ಪಿಎಂ ಕಿಸಾನ್ ರೈತು ಭರೋಸಾ (ಪ್ರತಿ ರೈತನಿಗೆ ₹13,500), ಚೆಯುಟಾ (ಹಿಂದುಳಿದ ವರ್ಗದವರಿಗೆ, ಎಸ್‌ಟಿ, ಎಸ್‌ಸಿ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಅಲ್ಪಸಂಖ್ಯಾತ ಮಹಿಳೆಯರಿಗೆ ತಲಾ ₹18,750), ವಾಹನಾ ಮಿತ್ರ (ಕ್ಯಾಬ್ / ಆಟೊ ಚಾಲಕರಿಗೆ ತಲಾ ₹10,000) ಮತ್ತು ಮತ್ಸ್ಯಾಕಾರ ಭರೋಸಾ (ಪ್ರತಿ ಮೀನುಗಾರನಿಗೆ ₹10,000) ಪ್ರಮುಖವಾಗಿವೆ.

ರಾಜ್ಯ ಹಣಕಾಸು ಸಚಿವ ಬುಗ್ಗನಾ ರಾಜೇಂದ್ರನಾಥ್ ಅವರುಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಹಣದ ಹರಿವಿನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸುವಾಗ, ಸೋರಿಕೆ ತಡೆಯಲು ವಿವಿಧ ಯೋಜನೆಗಳ ಎಲ್ಲ ಫಲಾನುಭವಿಗಳ ದತ್ತಾಂಶ (ಡೇಟಾ) ಮರು ಮೌಲ್ಯಮಾಪನ ಮಾಡಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.