ಅಮರಾವತಿ: ಇದೇ 27ರಿಂದ ಚಿತ್ತೂರು ಜಿಲ್ಲೆಯ ಕುಪ್ಪಂನಿಂದ ಆರಂಭವಾಗಲಿರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ 4 ಸಾವಿರ ಕಿ.ಮೀ ಉದ್ದದ ಪಾದಯಾತ್ರೆಗೆ ಆಂಧ್ರಪ್ರದೇಶದ ಪೊಲೀಸರು ಮಂಗಳವಾರ ಅನುಮತಿ ನೀಡಿದ್ದಾರೆ.
‘ಯಾತ್ರೆಯ ಭಾಗವಾಗಿ ನಡೆಯಲಿರುವ ಎಲ್ಲಾ ಸಾರ್ವಜನಿಕ ಸಭೆಗಳಿಗೆ ಪೊಲೀಸರು ಸಾಮಾನ್ಯವಾದ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಆದರೆ, ಪಾದಯಾತ್ರೆಗೆ ಯಾವುದೇ ನಿರ್ದಿಷ್ಟ ಷರತ್ತು ವಿಧಿಸಲಾಗಿಲ್ಲ’ ಎಂದು ಚಿತ್ತೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶಾಂತ್ ರೆಡ್ಡಿ ತಿಳಿಸಿದ್ದಾರೆ.
‘ಪಾದಯಾತ್ರೆಯು ಹೊಸ ಕ್ಷೇತ್ರಕ್ಕೆ ಬಂದಾಗಲೆಲ್ಲಾ ಸಂಘಟಕರು ಸಂಬಂಧಪಟ್ಟ ಜಿಲ್ಲೆಯ ಪೊಲೀಸರಿಂದ ಅನುಮತಿ ಪಡೆಯಬೇಕು’ ಎಂದೂ ಅವರು ಹೇಳಿದ್ದಾರೆ.
‘ಪಾದಯಾತ್ರೆಗೆ ‘ಯುವ ಗಲಂ’ (ಯುವಜನರ ಧ್ವನಿ) ಎಂದು ಹೆಸರಿಡಲಾಗಿದ್ದು, ಲೋಕೇಶ್ ಅವರು ಕುಪ್ಪಂನಿಂದ ಇಚ್ಚಾಪುರದವರೆಗೆ 400 ದಿನಗಳಲ್ಲಿ ಸುಮಾರು 125 ಕ್ಷೇತ್ರಗಳಲ್ಲಿ ಸಂಚರಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ’ ಎಂದು ಟಿಡಿಪಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.