ನವದೆಹಲಿ (ಪಿಟಿಐ): ದೇಶದಲ್ಲಿ ‘ಸ್ಪುಟ್ನಿಕ್ ವಿ’ ಲಸಿಕೆ ಅಭಿಯಾನ ಆರಂಭಿಸಲು ಡಾ.ರೆಡ್ಡೀಸ್ ಲ್ಯಾಬೊರೇಟರಿಸ್ ಮತ್ತು ಅಪೊಲೊ ಹಾಸ್ಪಿಟಲ್ಸ್ ಸೋಮವಾರ ಸಹಭಾಗಿತ್ವವನ್ನು ಪ್ರಕಟಿಸಿವೆ.
ಲಸಿಕೆಯ ಅಭಿಯಾನದ ಮೊದಲ ಹಂತವು ಹೈದರಾಬಾದ್‌ನಲ್ಲಿ ಸೋಮವಾರ ಆರಂಭವಾಗಿದ್ದು, ವಿಶಾಖಪಟ್ಟಣಂನಲ್ಲಿ ಮಂಗಳವಾರ (ಮೇ 18) ಆರಂಭವಾಗಲಿದೆ. ಕೋ–ವಿನ್ ಆ್ಯಪ್‌ನಲ್ಲಿ ನೋಂದಣಿ ಸೇರಿದಂತೆ ಸರ್ಕಾರ ಪ್ರಕಟಿಸಿರುವ ಮಾರ್ಗದರ್ಶಿ ನಿಯಮಗಳ ಅನುಸಾರವೇ ಅಭಿಯಾನ ನಡೆಯಲಿದೆ.
ಅಪೊಲೊ ಹಾಸ್ಪಿಟಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಗೀತಾ ರೆಡ್ಡಿ ಅವರು, ಆಸ್ಪತ್ರೆ ಸಮೂಹಕ್ಕೆ ಮುಂದಿನ ಒಂದು ತಿಂಗಳಲ್ಲಿ 10 ಲಕ್ಷ ಡೋಸ್ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದರು.
ರೆಡ್ಡೀಸ್ ಲ್ಯಾಬೊರೇಟರಿ ಜೊತೆಗೆ ಅಪೊಲೊ ಆಸ್ಪತ್ರೆಯು ಸಹಯೋಗ ಹೊಂದಿರುವುದಕ್ಕೆ ಹೆಮ್ಮೆ ಎನಿಸಲಿದೆ. ಒಂದು ತಿಂಗಳಲ್ಲಿ 10 ಲಕ್ಷ ಡೋಸ್ ಲಸಿಕೆ ಲಭ್ಯವಾಗಲಿದೆ ಎಂದು ಅವರು ಟ್ವೀಟ್ ಮಾಡಿದರು.
ಪ್ರಾಯೋಗಿಕ ಅಭಿಯಾನಕ್ಕಾಗಿ ಅಪೊಲೊ ಆಸ್ಪತ್ರೆಯು, ರೆಡ್ಡೀಸ್ ಲ್ಯಾಬೊರೇಟರಿಯು ಮೊದಲ ಹಂತದಲ್ಲಿ ಆಮದು ಮಾಡಿಕೊಂಡಿರುವ 1.5 ಲಕ್ಷ ಡೋಸ್‌ನಲ್ಲಿ ಲಸಿಕೆಯನ್ನು ಸ್ವೀಕರಿಸಲಿದೆ.
ಹೈದರಾಬಾದ್ ಮತ್ತು ವಿಶಾಖಪಟ್ಟಣಂ ನಂತರ ಲಸಿಕೆ ಅಭಿಯಾನವನ್ನು ಬೆಂಗಳೂರು, ದೆಹಲಿ, ಮುಂಬೈ, ಅಹಮದಾಬಾದ್, ಕೋಲ್ಕೊತ್ತ ಮತ್ತು ಪುಣೆಗೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.