ADVERTISEMENT

ವಾಣಿಜ್ಯ ಪದವಿಗೆ ಪ್ರವೇಶ: ಅನ್ವಯಿಕ ಗಣಿತವೂ, ಗಣಿತ ವಿಷಯಕ್ಕೆ ಸಮಾನ -ಯುಜಿಸಿ

ಪಿಟಿಐ
Published 17 ಸೆಪ್ಟೆಂಬರ್ 2021, 10:19 IST
Last Updated 17 ಸೆಪ್ಟೆಂಬರ್ 2021, 10:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಪದವಿಯಲ್ಲಿ ಮಾನವಿಕ ಮತ್ತು ವಾಣಿಜ್ಯ ಕೋರ್ಸ್‌ಗಳಿಗೆ ಸೇರ ಬಯಸುವ 12ನೇ ತರಗತಿಯ ವಿದ್ಯಾರ್ಥಿಗಳ ಸರಾಸರಿ ಅಂಕಗಳನ್ನು ಪರಿಗಣಿಸುವಾಗ ಗಣಿತ ವಿಷಯಕ್ಕೆ ಸಮನಾಗಿ ಅನ್ವಯಿಕ ಗಣಿತ ವಿಷಯದ ಅಂಕಗಳನ್ನೂ (ಆಯ್ಕೆ ವಿಷಯ) ಪರಿಗಣಿಸುವಂತೆ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ (ಯುಜಿಸಿ) ದೇಶದ ಎಲ್ಲ ವಿಶ್ವ ವಿದ್ಯಾಲಯಗಳಿಗೂ ನಿರ್ದೇಶನ ನೀಡಿದೆ.

ಕೆಲ ವಿಶ್ವವಿದ್ಯಾಲಯಗಳು ಅರ್ಥಶಾಸ್ತ್ರ, ವಾಣಿಜ್ಯ ಮತ್ತು ಸಮಾಜ ವಿಜ್ಞಾನಗಳ ವಿಷಯಗಳ ಪದವಿ ಕೋರ್ಸ್‌ಗಳಿಗೆ ಪ್ರವೇಶ ಒದಗಿಸಲು, ವಿದ್ಯಾರ್ಥಿಗಳು ಗಣಿತವನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು ಎಂದು ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಸಲ್ಲಿಸಿದ ಮನವಿ ಮೇರೆಗೆ ಯುಜಿಸಿ ಎಲ್ಲ ವಿವಿಗಳಿಗೆ ಈ ನಿರ್ದೇಶನ ನೀಡಿದೆ.

‘ಸಿಬಿಎಸ್‌ಇ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯಿಕ ಗಣಿತವನ್ನು ಶೈಕ್ಷಣಿಕ ಆಯ್ಕೆ ವಿಷಯವಾಗಿ ಪರಿಚಯಿಸಿದೆ. ಈ ವಿಷಯದಲ್ಲಿ ಥಿಯರಿಗೆ ಶೇ 80 ಮತ್ತು ಪ್ರಾಯೋಗಿಕ ಪರೀಕ್ಷೆಗೆ ಶೇ 20 ಅಂಕಗಳನ್ನು ನಿಗದಿಪಡಿಸಲಾಗಿದೆ‘ ‌ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್, ಎಲ್ಲ ವಿವಿಗಳ ಕುಲಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ವಿಷಯದಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು, ಪ್ರವೇಶಾತಿ ಅರ್ಹತೆಗಾಗಿ ಪರಿಗಣಿಸುವ ಸರಾಸರಿ ಅಂಕಗಳೊಂದಿಗೆ ಸೇರಿಸಬಹುದು. ಶುದ್ಧ ವಿಜ್ಞಾನವನ್ನು ಹೊರತುಪಡಿಸಿ ಮಾನವಿಕ ಮತ್ತು ವಾಣಿಜ್ಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಒಟ್ಟು ಸರಾಸರಿ ಅಂಕಗಳನ್ನು ಲೆಕ್ಕ ಹಾಕುವಾಗ ಅನ್ವಯಿಕ ಗಣಿತವನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ‘ ಜೈನ್‌ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.