ADVERTISEMENT

ಸಮಿತಿ ಶಿಫಾರಸಿನ ಮೇಲೆ ರಾಷ್ಟ್ರಪತಿಯಿಂದ ಸಿಇಸಿ, ಇಸಿ ನೇಮಕ: ಸುಪ್ರೀಂ ಕೋರ್ಟ್

ಪಿಟಿಐ
Published 3 ಮಾರ್ಚ್ 2023, 3:59 IST
Last Updated 3 ಮಾರ್ಚ್ 2023, 3:59 IST
   

ನವದೆಹಲಿ: ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರಬಲ್ಲ ತೀರ್ಪನ್ನು ಗುರುವಾರ ನೀಡಿದೆ. ಮುಖ್ಯ ಚುನಾವಣಾ ಆಯುಕ್ತ (ಸಿ.ಇ.ಸಿ) ಮತ್ತು ಚುನಾವಣಾ ಆಯುಕ್ತರನ್ನು (ಇ.ಸಿ) ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅಥವಾ ಅತಿ ದೊಡ್ಡ ಪಕ್ಷದ ನಾಯಕ) ಮತ್ತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯು ಸದಸ್ಯರಾಗಿರುವ ಸಮಿತಿಯ ಸಲಹೆ ಯಂತೆ ರಾಷ್ಟ್ರಪತಿ ನೇಮಿಸಬೇಕು ಎಂದು ತೀರ್ಪು ನೀಡಿದೆ.

ಚುನಾವಣೆಯ ಪರಿಶುದ್ಧತೆಯನ್ನು ಕಾಯ್ದುಕೊಳ್ಳಲು ಇದು ಅಗತ್ಯ ಎಂದು ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ನೇತೃತ್ವದ ಪೀಠವು ಹೇಳಿದೆ. ಚುನಾವಣಾ ಪ್ರಕ್ರಿಯೆಯನ್ನು ಬಹುಕಾಲದಿಂದ ನಿರಂತರವಾಗಿ ದುರ್ಬಳಕೆ ಮಾಡಿರುವುದು ಪ್ರಜಾ ಪ್ರಭುತ್ವವನ್ನು ಸಮಾಧಿಯತ್ತ ಸಾಗಿ ಸುವ ದಾರಿಯಾಗಿದೆ ಎಂದೂ ಸರ್ವಾ ನುಮತದ ತೀರ್ಪಿನಲ್ಲಿ ಹೇಳಲಾಗಿದೆ.

ಚುನಾವಣೆಯ ಪರಿಶುದ್ಧತೆ ಯನ್ನು ಕಾಯ್ದುಕೊಳ್ಳದೇ ಇದ್ದರೆ ಅದು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗಬಹುದು. ಚುನಾವಣಾ ಆಯುಕ್ತರ ನೇಮಕದ ಕುರಿತಂತೆ ಸಂಸತ್ತು ಕಾಯ್ದೆ ರೂಪಿಸುವವರೆಗೆ ಈ ವ್ಯವಸ್ಥೆ ಜಾರಿ ಯಲ್ಲಿರಲಿದೆ ಎಂದು ಪೀಠವು ಹೇಳಿದೆ.

ADVERTISEMENT

ಈವರೆಗೆ, ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತ ರನ್ನು ಸಂವಿಧಾನದ 324ನೇ ವಿಧಿಯ ಅನುಸಾರ ಕೇಂದ್ರ ಸರ್ಕಾರದ ಸಲಹೆ ಯಂತೆ ರಾಷ್ಟ್ರಪತಿ ನೇಮಿಸುತ್ತಿದ್ದರು.

ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕ ಇಲ್ಲದೇ ಇದ್ದರೆ ಅತಿ ದೊಡ್ಡ ಪಕ್ಷದ ನಾಯಕ ಸಮಿತಿಯಲ್ಲಿ ಇರಬೇಕು ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿ ಪೀಠವು ತೀರ್ಪು ನೀಡಿದೆ.

ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಅವರು ಮುಖ್ಯ ತೀರ್ಪಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮದೇ ಆದ ಪ್ರತ್ಯೇಕ ತೀರ್ಪು ಕೊಟ್ಟಿದ್ದಾರೆ.

‘ಸಂಬಂಧಪಟ್ಟ ಎಲ್ಲರೂ ರಾಜಿ ರಹಿತವಾಗಿ ಕೆಲಸ ಮಾಡಿದಾಗ ಮಾತ್ರ ಪ್ರಜಾಸತ್ತೆಯು ಯಶಸ್ವಿಯಾಗಲು ಸಾಧ್ಯ. ಅತ್ಯಂತ ಜಾಗರೂಕತೆಯಿಂದ ಕೂಡಿದ ಚುನಾವಣಾ ಪ್ರಕ್ರಿಯೆಯೇ ಪ್ರಜಾಸತ್ತೆಯಲ್ಲಿ ಬಹಳ ಮುಖ್ಯವಾ ದುದು. ಚುನಾವಣಾ ಪ್ರಕ್ರಿಯೆಯು ಪರಿಶುದ್ಧವಾಗಿದ್ದಾಗ ಮಾತ್ರ ಜನರ ಇಚ್ಛೆಯು ಅಲ್ಲಿ ಪ್ರತಿಫಲಿತವಾಗಲು ಸಾಧ್ಯ. ಚುನಾವಣಾ ಆಯೋಗವು ನ್ಯಾಯಸಮ್ಮತವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡಲೇಬೇಕು ಮತ್ತು ಸಂವಿಧಾನದಲ್ಲಿರುವ ಅಂಶಗಳಿಗೆ ಬದ್ಧವಾಗಿರಬೇಕು’ ಎಂದು ಪೀಠವು ವಿವರಿಸಿದೆ.

‘ರಾಜಕೀಯ ಪಕ್ಷಗಳು, ಅವುಗಳ ಅಭ್ಯರ್ಥಿಗಳು ಮತ್ತು ಬಹುಮಟ್ಟಿಗೆ ಪ್ರಜಾಪ್ರಭುತ್ವದ ವಿಧಿಯು ಚುನಾವಣಾ ಆಯೋಗದ ಕೈಯಲ್ಲಿಯೇ ಇದೆ. ಆಯೋಗಕ್ಕೆ ನೆರವಾಗಲು ಹಲವು ಅಧಿಕಾರಿಗಳು ಇರಬಹುದು. ಆದರೆ, ಮುಖ್ಯವಾದ ನಿರ್ಧಾರಗಳನ್ನು ಆಯೋಗದ ಮುಖ್ಯಸ್ಥ ಸ್ಥಾನದಲ್ಲಿ ಇರುವ ವರೇ ತೆಗೆದುಕೊಳ್ಳುತ್ತಾರೆ. ನಿರ್ಧಾರಗಳ ಹೊಣೆಗಾರಿಕೆಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತ ರದ್ದೇ ಆಗಿರುತ್ತದೆ’ ಎಂದು ಪೀಠವು ಹೇಳಿದೆ.

ಅತಿಯಾದ ಆತುರಕ್ಕೆ ಆಕ್ಷೇಪ

ನಿವೃತ್ತ ಅಧಿಕಾರಿ ಅರುಣ್‌ ಗೋಯಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ಅತ್ಯಂತ ಆತುರದಲ್ಲಿ ನೇಮಿಸಿದ ಕೇಂದ್ರ ಸರ್ಕಾರದ ನಡೆಯನ್ನು ವಿಚಾರಣೆಯ ಸಂದರ್ಭದಲ್ಲಿ ಪೀಠವು ಪ್ರಶ್ನಿಸಿತ್ತು. ಅವರ ನೇಮಕಕ್ಕೆ ಸಂಬಂಧಿಸಿದ ಕಡತವು ವಿವಿಧ ಇಲಾಖೆಗಳ ನಡುವೆ 24 ತಾಸುಗಳೊಳಗೆ ಮಿಂಚಿನ ವೇಗದಲ್ಲಿ ಸಂಚರಿಸಿತ್ತು ಎಂದು ಪೀಠವು ಹೇಳಿತ್ತು. ಆದರೆ, ಈ ಅಭಿಪ್ರಾಯವನ್ನು ಕೇಂದ್ರವು ವಿರೋಧಿಸಿತ್ತು. ಅವರ ನೇಮಕವನ್ನು ಸಮಗ್ರವಾಗಿ ನೋಡುವ ಅಗತ್ಯ ಇದೆ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಹೇಳಿದ್ದರು.

ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಕಳೆದ ವರ್ಷ ನವೆಂಬರ್‌ 19ರಂದು ಗೋಯಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.