
ಅರಾವಳಿ ಪರ್ತಗಳ ಸಾಲು ಹಾಗೂ ರಾಜೇಂದ್ರ ಸಿಂಗ್ (ಒಳಚಿತ್ರ)
ನವದೆಹಲಿ: ಅರಾವಳಿ ಬೆಟ್ಟ ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನದಿಂದ ತೀವ್ರ ನೋವಾಗಿದ್ದು, ಇದೀಗ ನವೆಂಬರ್ 20 ನಿರ್ದೇಶನಗಳಿಗೆ ತಡೆ ನೀಡಿರುವುದನ್ನು ಸ್ವಾಗತಿಸುವುದಾಗಿ ಪರಿಸರ ಹೋರಾಟಗಾರ, 'ವಾಟರ್‌ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಈ ಸಂಬಂಧ ಸವಿವರ ಪತ್ರ ಬರೆದಿದ್ದ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್ ಅವರು, ಇದರಿಂದ ಅರಾವಳಿ ಬೆಟ್ಟ ಶ್ರೇಣಿಗಳ ಸಮಗ್ರತೆಗೆ ಧಕ್ಕೆಯಾಗಲಿದೆ. ಅಲ್ಲದೆ ಅರಾವಳಿಯ ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಯುವ ಅಪಾಯದ ಕುರಿತು ಕಳವಳ ವ್ಯಕ್ತಪಡಿಸಿದ್ದರು.
'ನನ್ನ ಇಡೀ ಜೀವನವನ್ನೇ ಪ್ರಕೃತಿ, ಜಲ ಮತ್ತು ಭೂಮಿಯ ರಕ್ಷಣೆಯ ಹೋರಾಟಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಈ ಹೋರಾಟ ಮುಂದುವರಿಯಲಿದೆ' ಎಂದು ಅವರು ಹೇಳಿದ್ದಾರೆ.
'ಅರಾವಳಿ, ಬೆಟ್ಟ ಶ್ರೇಣಿಗಳ ಪರಿಸರ ವ್ಯವಸ್ಥೆಯಾಗಿದೆ. ಗಾಳಿ, ಅಂತರ್ಜಲ, ಜಲ ವ್ಯವಸ್ಥೆ, ಸಸ್ಯವರ್ಗ, ಅರಣ್ಯ, ವನ್ಯಜೀವಿಗಳು ಸೇರಿದಂತೆ ಎಲ್ಲ ವಿಧದ ಜೀವವೈವಿಧ್ಯಗಳು ಒಟ್ಟಾಗಿ ಹಲವಾರು ವರ್ಷಗಳಿಂದ ಅರಾವಳಿಯನ್ನು ರೂಪಿಸಿವೆ. ಈ ಜೀವವೈವಿಧ್ಯಗಳು ಒಟ್ಟಾಗಿ ಅವುಗಳನ್ನು ಉಳಿಸಿಕೊಳ್ಳುತ್ತವೆ' ಎಂದಿದ್ದಾರೆ.
'ಹಾಗಿರುವಾಗ ಅದನ್ನು ಮರುವ್ಯಾಖ್ಯಾನಿಸಲು ಸಾಧ್ಯವೆ? ಇಂತಹ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತ್ಯವ್ಯವಾಗಿದೆ. ಪ್ರಕೃತಿಗೆ ಸಂಬಂಧಿಸಿದ ಮೂಲಭೂತ ಸಾಂವಿಧಾನಿಕ ತತ್ವಗಳು ಅದನ್ನೇ ಸಾರಿ ಹೇಳುತ್ತವೆ' ಎಂದಿದ್ದಾರೆ.
'ಅರಾವಳಿಯ ಭೌಗೋಳಿಕ ಮಹತ್ವ ಎಲ್ಲರಿಗೂ ತಿಳಿದಿದೆ. ಇದರ ಮಹತ್ವವನ್ನು ಸುಪ್ರೀಂ ಕೋರ್ಟ್ ಸಹ ಒಪ್ಪಿಕೊಂಡಿದೆ. ಹಿಮಾಲಯ, ಸಮುದ್ರ ಮತ್ತು ಸುತ್ತುಮುತ್ತಲಿನ ಸಹ್ಯಾದ್ರಿ ಶ್ರೇಣಿಗಳ ಸಂರಚನೆಯಲ್ಲೂ ಅರಾವಳಿ ಪಾತ್ರ ವಹಿಸಿದೆ. ಹವಾಮಾನ ಬದಲಾವಣೆಯ ಈ ಸಮಯದಲ್ಲಿ ಅರಾವಳಿಗೆ ಹಾನಿಯನ್ನುಂಟು ಮಾಡುವ ಸ್ಥಿತಿಯನ್ನು ಊಹಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.
'ಅರಾವಳಿಯ ಸಂರಕ್ಷಣೆ ಹಾಗೂ ಅದರ ಹಸಿರನ್ನು ಸಮೃದ್ಧವಾಗಿಡುವುಡುವುದು ಈಗಿನ ಅಗತ್ಯವಾಗಿದೆ. ಇದರಿಂದ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಸಾಧ್ಯ. ಹಾಗಾಗಿ ಅರಾವಳಿಗೆ ಹಾನಿಯಾಗುವ ಯಾವುದೇ ಗಣಿಗಾರಿಕೆ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ತಿರಸ್ಕರಿಸಬೇಕು' ಎಂದು ವಿನಂತಿಸಿದ್ದಾರೆ.
1994ರಲ್ಲಿ ನಾನು ಸಲ್ಲಿಸಿದ ಅರ್ಜಿಯ ಅಧಾರದಲ್ಲಿ ನ್ಯಾಯಮೂರ್ತಿ ವೆಂಕಟಚಯ್ಯ ನೇತೃತ್ವದ ಪೀಠವು ಸರಿಸ್ಕಾದಲ್ಲಿ 478 ಗಣಿಗಳನ್ನು ಮುಚ್ಚಲು ಆದೇಶಿಸಿತ್ತು ಮತ್ತು ಅರಾವಳಿಯಾದ್ಯಂತ ಗಣಿಗಾರಿಕೆಯನ್ನು ನಿಲ್ಲಿಸಿತು ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ರಕ್ಷಣೆಗಾಗಿ ಸುಪ್ರೀಂ ಕೋರ್ಟ್ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.
ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ತೀರ್ಪಿನಲ್ಲಿನ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಇಂದು (ಡಿ.29) ತಡೆ ಹಿಡಿದಿದೆ. ಅಲ್ಲದೆ ಈ ವಿಷಯದ ಕುರಿತು ಸಮಗ್ರವಾಗಿ ಪರಿಶೀಲಿಸಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿಯನ್ನು ರಚಿಸಲು ಪ್ರಸ್ತಾಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.