ADVERTISEMENT

ಸಾರ್ವಜನಿಕ ನೀತಿಗೆ ವಿರೋಧಿಯಾಗಿದ್ದರಷ್ಟೇ ಮಧ್ಯಸ್ಥಿಕೆದಾರರ ಆದೇಶ ರದ್ದು: ಸುಪ್ರೀಂ

ಪಿಟಿಐ
Published 13 ಜನವರಿ 2022, 12:04 IST
Last Updated 13 ಜನವರಿ 2022, 12:04 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮಧ್ಯಸ್ಥಿಕೆ ಕಾಯ್ದೆಯಡಿ ನೀಡಿದ ಆದೇಶವು ಒಂದು ವೇಳೆ ಕಾನೂನಿನ ಪ್ರಕಾರ ಸಾರ್ವಜನಿಕ ನೀತಿಗೆ ವ್ಯತಿರಿಕ್ತವಾಗಿದ್ದರಷ್ಟೇ ಆ ಆದೇಶವನ್ನು ರದ್ದುಪಡಿಸಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆದೇಶವು ಸಾರ್ವಜನಿಕ ನೀತಿ, ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಿಳಿದರೆ ರದ್ದುಪಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಚಂಡೀಗಡದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮತ್ತು ಮಧ್ಯಸ್ಥಿಕೆದಾರರು 2005ರಲ್ಲಿ ನೀಡಿದ್ದ ಆದೇಶ ರದ್ದುಪಡಿಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಹರಿಯಾಣ ಪ್ರವಾಸೋದ್ಯಮ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ADVERTISEMENT

ಹರಿಯಾಣ ಪ್ರವಾಸೋದ್ಯಮ ಸಂಸ್ಥೆಯು (ಎಚ್‌ಟಿಎಲ್‌) ತಂಪುಪಾನೀಯ ಪೂರೈಸಲು ಟೆಂಡರ್ ಕರೆದಿದ್ದು, ಕಂಧಾರಿ ಬಿವರೇಜಸ್‌ ಸಂಸ್ಥೆಯು ಸಲ್ಲಿಸಿದ್ದ ಟೆಂಡರ್‌ ಸ್ವೀಕೃತವಾಗಿತ್ತು. ಎಚ್‌ಟಿಎಲ್ ಬಳಿಕ ಟೆಂಡರ್ ರದ್ದುಪಡಿಸಿದ್ದು, ಈ ವಿವಾದವು ಮಧ್ಯಸ್ಥಿಕೆದಾರರ ಬಳಿಗೆ ಬಂದಿತ್ತು.

ಮಧ್ಯಸ್ಥಿಕೆದಾರರು ಕಂಧಾರಿ ಬಿವರೇಜಸ್‌ ಸಂಸ್ಥೆಗೆ ₹ 9.5 ಲಕ್ಷ ಪಾವತಿಸಲು ಆದೇಶಿಸಿದ್ದರು. ಬಳಿಕ, ₹ 13.92 ಲಕ್ಷ ಪಾವತಿಗೆ ಆದೇಶಿಸಬೇಕು ಎಂಬ ಮನವಿಯನ್ನು ತಿರಸ್ಕರಿಸಿದ್ದರು. ಇದು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜಿಲ್ಲಾ ಸೆಷನ್ಸ್‌ ಕೋರ್ಟ್‌ ತಳ್ಳಿಹಾಕಿದ್ದು, ಬಳಿಕ ವಿಷಯ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್‌ ಆಕ್ಷೇಪಣೆಯನ್ನು ಒಪ್ಪಿದ್ದು, ಮಧ್ಯಸ್ಥಿಕೆದಾರರು ಮತ್ತು ಜಿಲ್ಲಾ ಸೆಷನ್ಸ್ ಕೋರ್ಟ್ ಆದೇಶವನ್ನು ವಜಾಮಾಡಿತ್ತು. ಸುಪ್ರೀಂ ಕೋರ್ಟ್‌ ಇದೀಗ ಹೈಕೋರ್ಟ್‌ ಆದೇಶವನ್ನು ರದ್ದುಗೊಳಿಸಿ, ಮಧ್ಯಸ್ಥಿಕೆದಾರರ ಆದೇಶವನ್ನೇ ಎತ್ತಿ ಹಿಡಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.