ADVERTISEMENT

ವ್ಯಭಿಚಾರ: ಶಿಸ್ತುಕ್ರಮಕ್ಕೆ ಸೇನೆಯಲ್ಲಿ ನಿರ್ದಿಷ್ಟ ವ್ಯವಸ್ಥೆ ಅಗತ್ಯ –ಸುಪ್ರೀಂ

ಪಿಟಿಐ
Published 29 ಸೆಪ್ಟೆಂಬರ್ 2022, 13:47 IST
Last Updated 29 ಸೆಪ್ಟೆಂಬರ್ 2022, 13:47 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಅಧಿಕಾರಿಗಳ ವಿರುದ್ಧದ ವ್ಯಭಿಚಾರ ಆರೋಪ‍ ಪ್ರಕರಣಗಳಲ್ಲಿ ಶಿಸ್ತುಕ್ರಮವನ್ನು ಜರುಗಿಸಲು ಸೇನೆಯಲ್ಲಿ ನಿರ್ದಿಷ್ಟ ವ್ಯವಸ್ಥೆ ಇರಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಆಭಿಪ್ರಾಯಪಟ್ಟಿದೆ. ‘ಇಂಥ ವರ್ತನೆಗಳು ಅಧಿಕಾರಿಗಳ ಬದುಕನ್ನೇ ಏರುಪೇರು ಮಾಡಲಿವೆ ಎಂಬ ಕಾರಣದಿಂದ ಇದು ಅಗತ್ಯವಾಗಿದೆ’ ಎಂದೂ ಕೋರ್ಟ್‌ ಹೇಳಿದೆ.

‘ವ್ಯಭಿಚಾರವು ಕುಟುಂಬದ ಮೇಲೆ ಪರಿಣಾಮ ಬೀರಲಿದೆ. ಇಂಥದ್ದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಸಮವಸ್ತ್ರ ಆಧರಿತ ಸೇವೆಯಲ್ಲಿ ಶಿಸ್ತಿಗೇ ಪ್ರಮುಖ ಸ್ಥಾನ ಇರಬೇಕು. ಸಮಾಜದ ಭಾಗವಾಗಿ ಪ್ರತಿಯೊಬ್ಬರೂ ಅಂತಿಮವಾಗಿ ಕುಟುಂಬದ ಮೇಲೇ ಅವಲಂಬಿತರಾಗಿರುತ್ತಾರೆ. ಸಮಾಜದಲ್ಲಿನ ಸ್ಥಾನವು ಸಂಗಾತಿ ಮೇಲಿನ ನಂಬಿಕೆ, ಗೌರವವನ್ನು ಆಧರಿಸಿದೆ’ ಎಂದು ಹೇಳಿದೆ.

‘ಹೀಗಾಗಿ, ಶಿಸ್ತಿಗೆ ಭಂಗ ತರುವ ವ್ಯಭಿಚಾರದಂತಹ ಪ್ರಕರಣಗಳಲ್ಲಿ ಕ್ರಮಜರುಗಿಸಲು ಸೇನೆಯಲ್ಲಿ ನಿರ್ದಿಷ್ಟ ವ್ಯವಸ್ಥೆ ಅಗತ್ಯವಾಗಿದೆ’ ಎಂದು ನ್ಯಾಯಮೂರ್ತಿ ಕೆ.ಎಂ.ಜೋಸೆಫ್‌ ನೇತೃತ್ವದ ಐವರು ಸದಸ್ಯರ ಪೀಠವು ಪ್ರತಿಪಾದಿಸಿತು.

ADVERTISEMENT

ವ್ಯಭಿಚಾರ ಅಸಾಂವಿಧಾನಿಕವಾದುದು, ದಂಡ ವಿಧಿಸಲು ಅವಕಾಶ ಇರಬೇಕು ಎಂದು ಘೋಷಿಸಿ ಸುಪ್ರೀಂಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪನ್ನು, ತಪ್ಪಿತಸ್ಥನ ವಿರುದ್ಧ ಶಿಸ್ತುಕ್ರಮ ಜರುಗಿಸುವುದಕ್ಕೆ ವಿರುದ್ಧವಾಗಿ ಉಲ್ಲೇಖಿಸಬಾರದು ಎಂದು ಪೀಠ ಹೇಳಿತು.

ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ, ಅನಿರುದ್ಧ ಬೋಸ್‌, ಹೃಷಿಕೇಷ್ ರಾಯ್‌, ಸಿ.ಟಿ.ರವಿಕುಮಾರ್ ಪೀಠದ ಇತರ ಸದಸ್ಯರು. ಹೆಚ್ಚುವರಿ ಸಾಲಿಸಿಟರ್ ಜನರಲ್‌ ಮಾಧವಿ ದಿವನ್‌ ಅವರು, 2018ರ ತೀರ್ಪು ಕುರಿತಂತೆ ಸ್ಪಷ್ಟನೆಯನ್ನು ಬಯಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.