ADVERTISEMENT

ಬಟಿಂಡಾ ಸೇನಾ ನೆಲೆಯಲ್ಲಿ ನಾಲ್ವರು ಸೈನಿಕರ ಹತ್ಯೆ: ಯೋಧನ ಬಂಧನ

ಪಿಟಿಐ
Published 17 ಏಪ್ರಿಲ್ 2023, 14:10 IST
Last Updated 17 ಏಪ್ರಿಲ್ 2023, 14:10 IST
.
.   

ಚಂಡೀಗಢ/ನವದೆಹಲಿ: ಪಂಜಾಬ್‌ನ ಬಟಿಂಡಾ ಸೇನಾ ನೆಲೆಯಲ್ಲಿ ಗುಂಡಿನ ದಾಳಿ ನಡೆಸಿ ನಾಲ್ವರು ಯೋಧರನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಯೋಧರೊಬ್ಬರನ್ನು ಕದ್ದ ರೈಫಲ್‌ನೊಂದಿಗೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಗನ್ನರ್ ದೇಸಾಯಿ ಮೋಹನ್‌ ಬಂಧಿತ ಯೋಧ. ಗುಂಡಿನ ದಾಳಿ ನಡೆದಿದ್ದ ಸ್ಥಳದಲ್ಲಿ ರೈಫಲ್‌ ಮತ್ತು ಕೊಡಲಿ ಹಿಡಿದಿದ್ದ ಇಬ್ಬರನ್ನು ನೋಡಿರುವುದಾಗಿ ಮೋಹನ್‌ ಈ ಹಿಂದೆ ಹೇಳಿಕೆ ನೀಡಿದ್ದರು.

‘ನಾಲ್ವರನ್ನು ತಾನೇ ಹತ್ಯೆ ಮಾಡಿರುವುದಾಗಿ ಮೋಹನ್‌ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಬಟಿಂಡಾದ ಪೊಲೀಸ್‌ ವರಿಷ್ಠಾಧಿಕಾರಿ ಗುಲ್‌ನೀತ್‌ ಸಿಂಗ್‌ ಖುರಾನ ತಿಳಿಸಿದ್ದಾರೆ.

ADVERTISEMENT

‘ಕೃತ್ಯದ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗದು. ಹತ್ಯೆಗೀಡಾಗಿರುವ ನಾಲ್ವರ ಯೋಧರೊಂದಿಗೆ ಮೋಹನ್‌ಗೆ ವೈಯಕ್ತಿಕ ದ್ವೇಷ ಇತ್ತು’ ಎಂದು ಹೇಳಿದ್ದಾರೆ.

ಗುಂಡಿನ ದಾಳಿ ನಡೆಯುವುದಕ್ಕೂ ಎರಡು ದಿನಗಳ ಮೊದಲು ಸೇನಾ ನೆಲೆಯಿಂದ ಇನ್ಸಾಸ್‌ ರೈಫಲ್‌ ಹಾಗೂ 28 ಸುತ್ತು ಮದ್ದುಗುಂಡುಗಳು ಕಾಣೆಯಾಗಿದ್ದವು.

ಸೇನಾ ನೆಲೆಯಿಂದ ಕದ್ದ ರೈಫಲ್‌ ಮತ್ತು ಮದ್ದುಗುಂಡುಗಳಿಂದಲೇ ಈ ಕೃತ್ಯಕ್ಕೆ ಬಳಸಲಾಗಿದೆ ಎಂಬುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಖುರಾನ ಅವರು ಹೇಳಿದ್ದಾರೆ.

‘ಪೊಲೀಸರು ವಿಚಾರಣೆ ನಡೆಸಿದ ಬಳಿಕ ಫಿರಂಗಿ ದಳದ ಗನ್ನರ್‌ ದೇಸಾಯಿ ಮೋಹನ್‌ ಅವರು ತಾನು ಇನ್ಸಾಸ್‌ ರೈಫಲ್‌ ಕದ್ದು, ನಾಲ್ವರು ಸಹೋದ್ಯೋಗಿಗಳನ್ನು ಹತ್ಯೆ ಮಾಡಿರುವುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

‘ಏಪ್ರಿಲ್‌ 9ರಂದು ಬೆಳಿಗ್ಗೆ ರೈಫಲ್‌ ಮತ್ತು ಮದ್ದುಗುಂಡುಗಳನ್ನು ಕದ್ದು, ಅಡಗಿಸಿಟ್ಟಿರುವುದಾಗಿ ಮೋಹನ್‌ ತಿಳಿಸಿದ್ದಾರೆ’ ಎಂದೂ ಹೇಳಿದೆ.

‘ಕೊಳಚೆ ಚರಂಡಿಯಲ್ಲಿ ಬಚ್ಚಿಟ್ಟಿದ್ದ ರೈಫಲ್‌ ಮತ್ತು ಮದ್ದುಗುಂಡುಗಳನ್ನು ವಶಪಡಿಸಲಾಗಿದೆ. ಪ‍ಂಜಾಬ್‌ ಪೊಲೀಸರು ನಡೆಸುತ್ತಿರುವ ತನಿಖೆಗೆ ಸಹಕಾರ ನೀಡಲಾಗುವುದು’ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.