ADVERTISEMENT

ಜಮ್ಮುವಿನಲ್ಲಿ ಉಗ್ರರ ಒಳನುಸುಳುವಿಕೆ ವಿರುದ್ಧ ಕಾರ್ಯಾಚರಣೆ: ಸೇನಾಧಿಕಾರಿ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 4:06 IST
Last Updated 12 ಏಪ್ರಿಲ್ 2025, 4:06 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಸೇನೆಯ ಕಿರಿಯ ಅಧಿಕಾರಿ (ಜೆಸಿಒ) ಮತ್ತು ಮೂವರು ಭಯೋತ್ಪಾದಕರು ಹತರಾಗಿದ್ದಾರೆ.

ಜಮ್ಮುವಿನ ಅಖ್ನೂರ್ ವಲಯದಲ್ಲಿ ನಡೆದ ಗುಂಡಿನ ಚಕಮಕಿ ಸಂದರ್ಭದಲ್ಲಿ, ಸೇನೆಯ ಅಧಿಕಾರಿ ಹುತಾತ್ಮರಾಗಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕರ ತಂಡವನ್ನು ಸೇನಾ ಸಿಬ್ಬಂದಿ ಗಮನಿಸಿದರು. ಅವರ ಮೇಲೆ ಗುಂಡು ಹಾರಿಸಿದಾಗ, ಚಕಮಕಿ ಆರಂಭವಾಯಿತು.

ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡ ಅಧಿಕಾರಿ, ಹುತಾತ್ಮರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಭಯೋತ್ಪಾದಕರಿಗಾಗಿ ಸ್ಥಳದಲ್ಲಿ ಹುಡುಕಾಟ ನಡೆದಿದೆ.

ADVERTISEMENT

ಇನ್ನೊಂದು ಘಟನೆಯಲ್ಲಿ, ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಮೂವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಇವರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದವರಲ್ಲಿ ಸಂಘಟನೆಯ ಮುಖ್ಯ ಕಮಾಂಡರ್ ಸೈಫುಲ್ಲಾ ಕೂಡ ಸೇರಿದ್ದಾನೆ.

ಒಬ್ಬ ಭಯೋತ್ಪಾದಕನನ್ನು ಶುಕ್ರವಾರವೇ ಹತ್ಯೆ ಮಾಡಲಾಗಿತ್ತು. ಇನ್ನಿಬ್ಬರನ್ನು ಶನಿವಾರ ಬೆಳಿಗ್ಗೆ ಪ್ರತಿಕೂಲ ಹವಾಮಾನದ ನಡುವೆಯೂ ಹತ್ಯೆ ಮಾಡಲಾಗಿದೆ.

ಉಧಂಪುರ ಜಿಲ್ಲೆಯ ಬಸಂತಗಢ ಮತ್ತು ರಾಮನಗರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ಶೋಧ ಕಾರ್ಯ ಮುಂದುವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.