ADVERTISEMENT

ನಕ್ಸಲರೊಂದಿಗೆ ಬಂಧಿತ ಹೋರಾಟಗಾರರ ನಂಟು: ಮಹಾರಾಷ್ಟ್ರ ಪೊಲೀಸರ ಸಮರ್ಥನೆ

ಪಿಟಿಐ
Published 31 ಆಗಸ್ಟ್ 2018, 18:34 IST
Last Updated 31 ಆಗಸ್ಟ್ 2018, 18:34 IST
ಹೆಚ್ಚುವರಿ ಡಿಜಿಪಿ ಪರಮವೀರ್‌ ಸಿಂಗ್‌ (ಮಧ್ಯದಲ್ಲಿ)
ಹೆಚ್ಚುವರಿ ಡಿಜಿಪಿ ಪರಮವೀರ್‌ ಸಿಂಗ್‌ (ಮಧ್ಯದಲ್ಲಿ)   

ಮುಂಬೈ: ‘ಮೋದಿ ಆಡಳಿತ ಕೊನೆಗಾಣಿಸಲು ರಾಜೀವ್‌ ಗಾಂಧಿ ಮಾದರಿಯ ಕೃತ್ಯ’ ನಡೆಸಲು ಬಂಧಿತ ಹೋರಾಟಗಾರರು ಸಂಚು ರೂಪಿಸಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ಶುಕ್ರವಾರ ಹೇಳಿದ್ದಾರೆ.

ಮಾವೊವಾದಿ ನಕ್ಸಲರ ಜತೆ ಬಂಧಿತ ಹೋರಾಟಗಾರರು ಪತ್ರ ವ್ಯವಹಾರ ನಡೆಸಿರುವುದಕ್ಕೆ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ರಾಜ್ಯ ಹೆಚ್ಚುವರಿ ಡಿಜಿಪಿ ಪರಮವೀರ್‌ ಸಿಂಗ್‌ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಕ್ಸಲರು ಮತ್ತು ಹೋರಾಟಗಾರರ ಸಂಪರ್ಕವನ್ನು ಸಾಬೀತುಪಡಿಸುವ ಸಾವಿರಾರು ಪತ್ರಗಳು, ಇ–ಮೇಲ್‌ ಮತ್ತು ದಾಖಲೆಗಳು ಪೊಲೀಸರ ಬಳಿ ಇವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಹೋರಾಟಗಾರರ ಬಂಧನಕ್ಕೆ ದೇಶದಾದ್ಯಂತ ಭಾರಿ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿರುವ ಕಾರಣ ಸಿಂಗ್ ಅವರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯ ಸಾಮಾಜಿಕ ಹೋರಾಟಗಾರ್ತಿ ರೋನಾ ವಿಲ್ಸನ್‌ ಮತ್ತು ಮಾವೊವಾದಿ ನಾಯಕ ಪ್ರಕಾಶ್‌ ನಡುವೆ 2017ರ ಜುಲೈ 30ರಂದು ನಡೆದಿರುವ ಪತ್ರ ವ್ಯವಹಾರದಲ್ಲಿ ಗ್ರೆನೇಡ್‌ ಲಾಂಚರ್‌ ಮತ್ತು ನಾಲ್ಕು ಲಕ್ಷ ಸುತ್ತು ಗುಂಡು ಖರೀದಿಸಲು ₹8 ಕೋಟಿ ಅಗತ್ಯವಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಪರಮ್‌ವೀರ್‌ಸಿಂಗ್‌ ಅವರು ತಿಳಿಸಿದ್ದಾರೆ.
**

ಬಂಧಿತರ ಬೆನ್ನಿಗೆ ನಿಂತ ನಿವೃತ್ತರು
ಭೀಮಾ ಕೋರೆಗಾಂವ್‌ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲಾದ ಐವರು ಹೋರಾಟಗಾರರಿಗೆ 48 ನಿವೃತ್ತ ಉನ್ನತ ಅಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಭಿನ್ನಮತ ಮತ್ತು ಟೀಕೆ ಸಹಿಸದ ಸರ್ಕಾರ ರಾಷ್ಟ್ರ ವಿರೋಧಿ ಇಲ್ಲವೇ ದೇಶದ್ರೋಹಿ ಹಣೆಪಟ್ಟಿ ಕಟ್ಟುತ್ತಿದೆ ಎಂದು ಮಾಜಿ ಅಧಿಕಾರಿಗಳು ಆರೋಪಿಸಿದ್ದಾರೆ.

ಜೂನ್‌ ಮತ್ತು ಆಗಸ್ಟ್‌ನಲ್ಲಿ ಬಂಧಿಸಲಾದ ಹತ್ತು ಹೋರಾಟಗಾರರ ವಿರುದ್ಧ ದಾಖಲಿಸಲಾದ ಸುಳ್ಳು ಪ್ರಕರಣ ಕೈಬಿಡುವಂತೆ ಒತ್ತಾಯಿಸಿ ಅವರು ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.
**
ಇದನ್ನೂ ಓದಿರಿ
*ಹೋರಾಟಗಾರರ ಬಂಧನ: ದಾಳಿ ಮಾಡಿದ ಪೊಲೀಸರಿಗೆ ಬಿಸಿ ಚಹಾದ ಆತಿಥ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.