ADVERTISEMENT

ಜಮ್ಮು–ಕಾಶ್ಮೀರ ಇಬ್ಬಾಗ ಮಾಡಿದ ಬಿಜೆಪಿ ನಡೆಗೆ ಅರ್ಥವಿಲ್ಲ: ಒಮರ್‌ ಅಬ್ದುಲ್ಲಾ

ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 16:12 IST
Last Updated 1 ಡಿಸೆಂಬರ್ 2021, 16:12 IST
ಒಮರ್‌ ಅಬ್ದುಲ್ಲಾ (ಸಂಗ್ರಹ ಚಿತ್ರ)
ಒಮರ್‌ ಅಬ್ದುಲ್ಲಾ (ಸಂಗ್ರಹ ಚಿತ್ರ)   

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ವಿಧಿಯನ್ನು ರದ್ದುಗೊಳಿಸುವುದು ಬಿಜೆಪಿಯ ಪ್ರಣಾಳಿಕೆಯಾಗಿತ್ತು. ಆದರೆ ರಾಜ್ಯದ ಸ್ಥಾನಮಾನವಿದ್ದ ಕಣಿವೆ ರಾಜ್ಯವನ್ನು ಇಬ್ಬಾಗ ಮಾಡಿ, ಕೇಂದ್ರಾಡಳಿತ ಪ್ರದೇಶವನ್ನು ಮಾಡಿದ್ದು ಯಾರಿಗೂ ಅರ್ಥ ಆಗಿಲ್ಲ. ಇದರಿಂದ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಏನು ಲಾಭ ಎಂಬುದಕ್ಕೆ ಯಾರ ಬಳಿಯ ಉತ್ತರವಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಟೀಕಿಸಿದ್ದಾರೆ.

ಜಮ್ಮುವಿನ ದೂಡಾ ಜಿಲ್ಲೆಯ ಭದರ್ವಾ ಪಟ್ಟಣದಲ್ಲಿ ಬುಧವಾರ ನಡೆದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಂವಿಧಾನದ 370 ವಿಧಿಯನ್ನು ರದ್ದುಗೊಳಿಸಿದನ್ನು ಸಮರ್ಥನೆ ಮಾಡಿಕೊಳ್ಳಲು ಬಿಜೆಪಿಯು ಸುಳ್ಳು ಹೇಳುತ್ತಾ ದೇಶವನ್ನು ದಾರಿತಪ್ಪಿಸುತ್ತಿದೆ. ಕಣಿವೆ ಪ್ರದೇಶದಲ್ಲಿ ಸದ್ಯ ಭದ್ರತಾ ವ್ಯವಸ್ಥೆ ಕುಸಿದಿದೆ. ಕಾಶ್ಮೀರದ ಯಾವುದೇ ಭಾಗದಲ್ಲಿ ಜನರಿಗೆ ಸುರಕ್ಷಿತ ಭಾವನೆ ಇಲ್ಲ. ಇಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗಿದ್ದು, ಹಿಂದಿನ ಕಾಶ್ಮೀರ ಪಂಡಿತರ ಹತ್ಯೆ ಸೇರಿದಂತೆ ಇತ್ತೀಚಿನ ಆಯ್ದ ಹತ್ಯೆಗಳು ಭದ್ರತಾ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತಿವೆ ಎಂದು ಆರೋಪಿಸಿದರು.

ADVERTISEMENT

ಚುನಾವಣೆ ಗೆಲ್ಲುವ ಸಲುವಾಗಿ ಧರ್ಮದ ಆಧಾರದ ಮೇಲೆ ನಮ್ಮನ್ನು ಹೊಡೆಯುವ ಪಿತೂರಿಯನ್ನು ವಿಫಲಗೊಳಿಸಲು ಎಲ್ಲರೂ ಭ್ರಾತೃತ್ವ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದರು.

2014ರಲ್ಲಿ ಪರಿಸ್ಥಿತಿಯ ಲಾಭ ಪಡೆದ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿಯು, ಪಿಡಿಪಿ ನೇತೃತ್ವದ ಸರ್ಕಾರವನ್ನು ಉರುಳಿಸಿ ನಂತರ ಸಂವಿಧಾನದ 370 ವಿಧಿಯನ್ನು ರದ್ದುಗೊಳಿಸಿತು. ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ, ಶಾಂತಿ, ಉಗ್ರ ಚಟುವಟಿಕೆ ಪ್ರತ್ಯೇಕತಾವಾದ ಅಂತ್ಯಗೊಳಿಸುವುದಾಗಿ ಬಿಜೆಪಿ ಹೇಳಿದ್ದ ಯಾವ ಹೇಳಿಕೆಯು ಕಾರ್ಯರೂಪಕ್ಕೆ ಬಂದಿಲ್ಲ. ಇದು ವಾಸ್ತವ. ಯಾವ ಉಗ್ರ ಚಟುವಟಿಕೆಗಳು ಎರಡು ವರ್ಷಗಳಲ್ಲಿ ಕೊನೆಗೊಂಡಿಲ್ಲ ಎಂದು ದೂರಿದರು.

ಪಾಕಿಸ್ತಾನ ಅಥವಾ ಇತರೆ ದೇಶಗಳಿಂದ ಕಣಿವೆ ಪ್ರದೇಶದ ಪರಿಸ್ಥಿತಿ ಗಂಭೀರವಾಗಿಲ್ಲ.ಹತಾಶೆಗೊಂಡ ಹೆಚ್ಚಿನ ಸಂಖ್ಯೆಯ ಸ್ಥಳೀಯ ಯುವಕರು ಉಗ್ರರ ಪಡೆಯನ್ನು ಸೇರುತ್ತಿರುವುದರಿಂದ ಇಲ್ಲಿನ ಪರಿಸ್ಥಿತಿ ಗಂಭೀರವಾಗಲು ಕಾರಣ. 2009–15ರ ಅವಧಿಯಲ್ಲಿ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಸುಸ್ಥಿತಿಯಲ್ಲಿದ್ದ ಕಾರಣ 40 ಭದ್ರತಾ ಶಿಬಿರಗಳನ್ನು ತೆರವುಗೊಳಿಸಲಾಗಿತ್ತು. ಆದರೆ ಈಗ ಶ್ರೀನಗರದಲ್ಲಿನ ಎಲ್ಲ ಸಮುದಾಯ ಭವನಗಳನ್ನು ಭದ್ರತಾ ಶಿಬಿರಗಳನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.