ಎಕ್ಸ್ ಚಿತ್ರ
ಕೊಚ್ಚಿ: ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ ಟು ಮಿ’ ಪುಸ್ತಕದ ಮಾರಾಟ, ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧಿಸುವಂತೆ ಕೇರಳ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿದೆ.
‘ಪುಸ್ತಕದ ಮುಖಪುಟದಲ್ಲಿ ಸಿಗರೇಟ್ ಸೇದುವ ಚಿತ್ರ ಬಳಸಿದ್ದರೂ, ಅದಕ್ಕೆ ಶಾಸನಬದ್ಧ ಆರೋಗ್ಯದ ಎಚ್ಚರಿಕೆ ನೀಡಿಲ್ಲ’ ಎಂದು ಅರ್ಜಿದಾರ ಕೊಚ್ಚಿ ಮೂಲದ ವಕೀಲ ರಾಜಸಿಂಹನ್ ಆರೋಪಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾ. ಬಸಂತ್ ಬಾಲಾಜಿ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘ಇಂಥ ವಿಷಯಗಳನ್ನು ನಿಯಂತ್ರಿಸಲು ಆಡಳಿತ ಯಂತ್ರದಲ್ಲಿ ಯಾವುದಾದರೂ ಅಸ್ತ್ರಗಳಿವೆಯೇ ಎಂಬುದನ್ನು ಖಚಿತಪಡಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು. ವಿಚಾರಣೆಯನ್ನು ಸೆ. 25ಕ್ಕೆ ಮುಂದೂಡಿತು.
‘ಪ್ರಸಿದ್ಧ ಲೇಖಕಿ ತನ್ನ ಪುಸ್ತಕದ ಮುಖಪುಟದ ಚಿತ್ರದ ಮೂಲಕ ಧೂಮಪಾನವನ್ನು ಉತ್ತೇಜಿಸುತ್ತಿದ್ದಾರೆ. ಅದರಲ್ಲೂ ಯುವತಿಯರು ಮತ್ತು ಮಹಿಳೆಯರಲ್ಲಿ ಧೂಮಪಾನ ಉತ್ತೇಜಿಸುತ್ತದೆ. ಜತೆಗೆ ಬೌದ್ಧಿಕ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂಬ ಸುಳ್ಳು ನಂಬಿಕೆಯನ್ನು ಸೃಷ್ಟಿಸುತ್ತದೆ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
‘ಈ ಚಿತ್ರವು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ನಿಯಂತ್ರಣ, ಉತ್ಪಾದನೆ, ಪೂರೈಕೆ ಮತ್ತು ವಿತರಣೆ ಕಾಯ್ದೆ (COTPA)) ಉಲ್ಲಂಘನೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.