ADVERTISEMENT

ಕೆಂಪುಕೋಟೆ ಹಿಂಸಾಚಾರವನ್ನು ಮೋದಿ ಸರ್ಕಾರವೇ ಆಯೋಜಿಸಿದೆ: ಅರವಿಂದ ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 13:15 IST
Last Updated 28 ಫೆಬ್ರುವರಿ 2021, 13:15 IST
ಅರವಿಂದ ಕೇಜ್ರಿವಾಲ್ (ಪಿಟಿಐ ಚಿತ್ರ)
ಅರವಿಂದ ಕೇಜ್ರಿವಾಲ್ (ಪಿಟಿಐ ಚಿತ್ರ)   

ನವದೆಹಲಿ: ಗಣರಾಜ್ಯೋತ್ಸವ ದಿನ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರವನ್ನು ಮೋದಿ ಸರ್ಕಾರವೇ ಆಯೋಜಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ಮೀರತ್‌ನಲ್ಲಿ ‘ಕಿಸಾನ್ ಮಹಾಪಂಚಾಯತ್’ ಉದ್ದೇಶಿಸಿ ಮಾತನಾಡಿದ ಅವರು, ‘ಕೆಂಪುಕೋಟೆಯ ಇಡೀ ಘಟನೆಗೆ ಅವರಿಂದಲೇ (ಮೋದಿ ಸರ್ಕಾರ) ಸಂಚು ರೂಪಿಸಲಾಗಿದೆ. ದೆಹಲಿಯ ಮಾರ್ಗ ತಿಳಿಯದವರಿಗೆ ಉದ್ದೇಶಪೂರ್ವಕ ತಪ್ಪು ಹಾದಿ ತೋರಿಸಲಾಗಿದೆ ಎಂದು ಅನೇಕ ಜನ ನನಗೆ ತಿಳಿಸಿದ್ದಾರೆ. ಅಲ್ಲಿ (ಕೆಂಪುಕೋಟೆಯಲ್ಲಿ) ಧ್ವಜ ಹಾರಿಸಿದ್ದು ಅವರ (ಬಿಜೆಪಿ) ಕಾರ್ಯಕರ್ತರು. ನಮ್ಮ ರೈತರು ಏನೇ ಮಾಡಿದರೂ ರಾಷ್ಟ್ರ ವಿರೋಧಿಗಳಲ್ಲ’ ಎಂದು ಹೇಳಿದ್ದಾರೆ.

ರೈತರ ಮೇಲೆ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇಂದು ಬಿಜೆಪಿಯ ಕೇಂದ್ರ ಸರ್ಕಾರ ದೇಶದ್ರೋಹದ ಕೃತ್ಯ ಎಸಗಿದ ಆರೋಪದಲ್ಲಿ ರೈತರ ಮೇಲೆ ಎಫ್‌ಐಆರ್ ದಾಖಲಿಸಿದೆ. ಅವರು (ಬಿಜೆಪಿಯವರು) ನಮ್ಮ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ಬ್ರಿಟಿಷರಿಗೂ ಇಷ್ಟು ಧೈರ್ಯ ಇರಲಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷವು (ಎಎಪಿ) ಆರಂಭದಿಂದಲೂ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬೆಂಬಲಕ್ಕೆ ನಿಂತಿದೆ. ಪ್ರಮುಖ ಪ್ರತಿಭಟನಾ ಸ್ಥಳವಾದ ಸಿಂಘು ಗಡಿಗೆ ಕೇಜ್ರಿವಾಲ್ ಎರಡು ಬಾರಿ ಭೇಟಿ ನೀಡಿದ್ದರು.

ರೈತರ ಪ್ರತಿಭಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾರ್ಚ್ 21ರಂದು ‘ಕಿಸಾನ್ ಮಹಾಸಮ್ಮೇಳನ್’ ಆಯೋಜಿಸಲು ಎಎಪಿ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.