ADVERTISEMENT

‘ಸ್ವಿಚ್‌ ದೆಹಲಿ’ ಅಭಿಯಾನಕ್ಕೆ ಕೇಜ್ರಿವಾಲ್‌ ಚಾಲನೆ

ಪಿಟಿಐ
Published 4 ಫೆಬ್ರುವರಿ 2021, 9:24 IST
Last Updated 4 ಫೆಬ್ರುವರಿ 2021, 9:24 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಎಲೆಕ್ಟ್ರಿಕ್‌ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗುರುವಾರ ‘ಸ್ವಿಚ್‌ ದೆಹಲಿ’ ಅಭಿಯಾನಕ್ಕೆ ಚಾಲನೆ ನೀಡಿದರು.

‘ನಗರದಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಜನರು ಎಲೆಕ್ಟ್ರಿಕ್‌ ವಾಹನಗಳನ್ನು ಉಪಯೋಗಿಸಬೇಕು’ ಎಂದು ಅವರು ಮನವಿ ಮಾಡಿದರು.

‘ದೆಹಲಿ ಸರ್ಕಾರವು ಮುಂದಿನ ಆರು ವಾರಗಳಲ್ಲಿ ವಿವಿಧ ಕಾರ್ಯಗಳಿಗಾಗಿ ಕೇವಲ ಎಲೆಕ್ಟ್ರಿಕ್‌ ವಾಹನಗಳನ್ನು ಮಾತ್ರ ಬಾಡಿಗೆಗೆ ಪಡೆಯಲಿದೆ’ ಎಂದು ಅವರು ತಿಳಿಸಿದರು.

ADVERTISEMENT

‘ದೊಡ್ಡ ಕಂಪನಿಗಳು ಸೇರಿದಂತೆ ಮಾಲ್‌ಗಳು ಮತ್ತು ಚಿತ್ರ ಮಂದಿರಗಳು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಬೇಕು. ಇದಕ್ಕಾಗಿ ತಮ್ಮ ಸಂಸ್ಥೆಯ ಆವರಣದಲ್ಲಿ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಸ್ಥಾಪಿಸಬೇಕು’ ಎಂದು ಅವರು ಕೋರಿದರು.

‘ದೆಹಲಿ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯು ವಿಶ್ವದ ಅತ್ಯುತ್ತಮ ನೀತಿಗಳಲ್ಲಿ ಒಂದಾಗಿದೆ. ಇದನ್ನು ಆದಷ್ಟು ಬೇಗ ಕಾರ್ಯಗತಗೊಳಿಸುವ ಸಮಯ ಬಂದಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಸ್ವಿಚ್‌ ದೆಹಲಿ’ ಅಭಿಯಾನದಡಿ ಎಲೆಕ್ಟ್ರಿಕ್‌ ವಾಹನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುವುದು. ಇದು ದೆಹಲಿಯನ್ನು ಸ್ವಚ್ಛ ಮತ್ತು ಮಾಲಿನ್ಯ ಮುಕ್ತ ನಗರವನ್ನಾಗಿ ಪರಿವರ್ತಿಸುವಲ್ಲಿ ಸಹಾಯ ಮಾಡಲಿದೆ . ಜನರು ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ಬದಲಾಗಿ ಎಲೆಕ್ಟ್ರಿಕ್‌ ವಾಹನವನ್ನು ಬಳಸುವ ಮೂಲಕ ಈ ಅಭಿಯಾನದಲ್ಲಿ ಭಾಗಿಯಾಗಬೇಕು ಎಂದು ಅವರು ಹೇಳಿದರು.

ದೆಹಲಿ ಸರ್ಕಾರವು ಎಲೆಕ್ಟ್ರಿಕ್‌ ವಾಹನದ ಬಳಕೆದಾರರಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ತೆರಿಗೆಯನ್ನು ಮುಕ್ತ ಮಾಡಲಿದೆ. ಅಲ್ಲದೆ ದ್ವಿಚಕ್ರ ಮತ್ತು ನಾಲ್ಕು ಚಕ್ರದ ಎಲೆಕ್ಟ್ರಿಕ್‌ ವಾಹನದ ಖರೀದಿಗೆ ಸಬ್ಸಿಡಿಯನ್ನು ಕೂಡ ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.