ADVERTISEMENT

‘ಝಡ್‌’ ಶ್ರೇಣಿ ಭದ್ರತೆ ಒಪ್ಪಿಕೊಳ್ಳಿ ಎಂಬ ಅಮಿತ್‌ ಶಾ ಮನವಿ ತಿರಸ್ಕರಿಸಿದ ಒವೈಸಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:28 IST
Last Updated 7 ಫೆಬ್ರುವರಿ 2022, 15:28 IST
ಅಮಿತ್‌ ಶಾ ಮತ್ತು ಅಸಾದುದ್ದೀನ್‌ ಒವೈಸಿ
ಅಮಿತ್‌ ಶಾ ಮತ್ತು ಅಸಾದುದ್ದೀನ್‌ ಒವೈಸಿ   

ನವದೆಹಲಿ: ‘ಝಡ್‌’ ಶ್ರೇಣಿಯ ಭದ್ರತೆಯನ್ನು ಒಪ್ಪಿಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಡಿದ ಮನವಿಯನ್ನು ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ತಿರಸ್ಕರಿಸಿದ್ದಾರೆ.

ಅಮಿತ್‌ ಶಾ ಮನವಿ ಕುರಿತು ಹೇಳಿಕೆ ನೀಡಿರುವ ಒವೈಸಿ, ‘ಮಾರಕಾಸ್ತ್ರಗಳನ್ನು ಹೊಂದಿರುವ ಜನರು ನನ್ನ ಸುತ್ತಲೂ ಇರಬೇಕೆಂದು ನಾನು ಬಯಸುವುದಿಲ್ಲ. ನಾನು ಸ್ವತಂತ್ರ ಹಕ್ಕಿ. ಮುಕ್ತವಾಗಿ ಜೀವಿಸಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಇಂದು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಝಡ್ ಶ್ರೇಣಿಯ ಭದ್ರತೆಯನ್ನು ಒಪ್ಪಿಕೊಳ್ಳುವಂತೆ ನನಗೆ ಕೇಳಿಕೊಂಡರು. ಸಿಎಎ ಪ್ರತಿಭಟನೆಯಲ್ಲಿ ಮೃತಪಟ್ಟ 22 ಜನರಿಗಿಂತ ನನ್ನ ಜೀವದ ಮೌಲ್ಯವು ಹೆಚ್ಚಲ್ಲ ಎಂಬುದಾಗಿ ನಾನು ಅವರಿಗೆ ಹೇಳಲು ಬಯಸುತ್ತೇನೆ’ ಎಂದು ಒವೈಸಿ ಹೇಳಿದ್ದಾರೆ.

ADVERTISEMENT

ಕೇಂದ್ರ ನೀಡಿರುವ ಝಡ್‌ ಶ್ರೇಣಿಯ ಭದ್ರತೆಯನ್ನು ತಿರಸ್ಕರಿಸಿರುವುದಾಗಿ ಒವೈಸಿ ಹೇಳಿದ್ದಾರೆ. ಅವರು ಈ ಭದ್ರತೆಯನ್ನು ಒಪ್ಪಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಗೃಹ ಸಚಿವ ಅಮಿತ್‌ ಶಾ ಸಂಸತ್‌ನಲ್ಲಿ ಹೇಳಿದ್ದರು.

ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಮುಗಿಸಿ ದೆಹಲಿಗೆ ತೆರಳುತ್ತಿದ್ದಾಗ ಒವೈಸಿ ಅವರ ಬೆಂಗಾವಲು ವಾಹನದ ಮೇಲೆ ಕಳೆದ ವಾರ ಗುಂಡಿನ ದಾಳಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.