ADVERTISEMENT

ಶ್ವೇತ ಭವನದಲ್ಲಿ ದೀಪಾವಳಿ ಸತ್ಕಾರಕೂಟ

ಪಿಟಿಐ
Published 25 ಅಕ್ಟೋಬರ್ 2022, 12:43 IST
Last Updated 25 ಅಕ್ಟೋಬರ್ 2022, 12:43 IST
ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಿದ್ದ ದೀಪಾವಳಿ ಸತ್ಕಾರಕೂಟದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ದೀಪ ಬೆಳಗಿದರು. ಅಮೆರಿಕ ಪ್ರಥಮ ಮಹಿಳೆ ಜಿಲ್‌ ಬೈಡನ್‌ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಉಪಸ್ಥಿತರಿದ್ದರು    –ಪಿಟಿಐ ಚಿತ್ರ
ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಿದ್ದ ದೀಪಾವಳಿ ಸತ್ಕಾರಕೂಟದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ದೀಪ ಬೆಳಗಿದರು. ಅಮೆರಿಕ ಪ್ರಥಮ ಮಹಿಳೆ ಜಿಲ್‌ ಬೈಡನ್‌ ಮತ್ತು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಉಪಸ್ಥಿತರಿದ್ದರು    –ಪಿಟಿಐ ಚಿತ್ರ   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಪ್ರಥಮ ಮಹಿಳೆ ಜಿಲ್‌ ಬೈಡನ್‌ ಅವರು ಶ್ವೇತಭವನದಲ್ಲಿ ದೀಪಾವಳಿ ಸತ್ಕಾರಕೂಟವನ್ನು ಸೋಮವಾರ ಆಯೋಜಿಸಿದ್ದರು. ಸುಮಾರು 200ಭಾರತೀಯ– ಅಮೆರಿಕನ್‌ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಭಾರತ–ಅಮೆರಿಕ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಕಾರ್ಯಕ್ರಮಗಳು ನಡೆದಿರುವ ಈಸ್ಟ್‌ ರೂಮ್‌ನಲ್ಲಿ ಈ ಸತ್ಕಾರಕೂಟ ಆಯೋಜಿಸಿದ್ದು ವಿಶೇಷವಾಗಿತ್ತು. ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್‌ ಬುಷ್‌ ಅವರ ಅವಧಿಯಿಂದಲೂ ಶ್ವೇತಭವನದಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಇಷ್ಟು ಅದ್ಧೂರಿ ದೀಪಾವಳಿಯನ್ನು ಶ್ವೇತಭವನದಲ್ಲಿ ಆಚರಿಸಲಾಗಿರುವುದು ಎನ್ನಲಾಗಿದೆ.

‘ನಿಮ್ಮೆಲ್ಲರಿಗೂ ಆತಿಥ್ಯ ನೀಡುತ್ತಿರುವುದಕ್ಕೆ ನಾವು ಹರ್ಷಿಸುತ್ತೇವೆ. ದೀಪಾವಳಿಯನ್ನು ಅಮೆರಿಕ ಸಂಸ್ಕೃತಿಯ ಹರ್ಷದಾಯಕ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು’ ಎಂದು ಬೈಡನ್‌ ಅವರು ಏಷ್ಯಾ–ಅಮೆರಿಕನ್‌ ಅತಿಥಿಗಳನ್ನು ಕುರಿತು ಹೇಳಿದರು.

ADVERTISEMENT

‘ಅಮೆರಿಕದಾದ್ಯಂತ ದೀಪಾವಳಿಯನ್ನು ಆಚರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮನೆಗಳನ್ನು, ಹೃದಯಗಳನ್ನು ತೆರೆದಿಟ್ಟು ಜನರು ದೀಪಾವಳಿ ಆಚರಿಸುತ್ತಿದ್ದಾರೆ. ಉಡುಗೊರೆಗಳ, ಸಿಹಿತಿಂಡಿಗಳ ವಿನಿಮಯ ಮತ್ತು ಸ್ನೇಹಿತರು, ಸಂಬಂಧಿಗಳಿಗಾಗಿ ಔತಣಗಳನ್ನು ಏರ್ಪಡಿಸುತ್ತಿದ್ದಾರೆ. ಆ ಮೂಲಕ ನಾವೆಲ್ಲರೂ ಒಗ್ಗೂಡುವಂತೆ ಮಾಡುತ್ತಿದ್ದಾರೆ. ಅಮೆರಿಕ ಜೀವನದ ಎಲ್ಲಾ ಭಾಗದಲ್ಲೂ ನಿಮ್ಮ ಕೊಡುಗೆ ಇದೆ. ಒಂದು ದೇಶವಾಗಿ ನಾವು ಯಾರು ಎಂಬುದನ್ನು ಪ್ರತಿಫಲಿಸುತ್ತಿರುವುದಕ್ಕೆ ಧನ್ಯವಾದಗಳು’ ಎಂದು ಬೈಡನ್‌ ಹೇಳಿದರು.

ಸತ್ಕಾರಕೂಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ಜರುಗಿದವು.

ಜಿಲ್ ಬಿಡೆನ್‌ ಧನ್ಯವಾದ: ‘ಧೈರ್ಯ ಮತ್ತು ಕರುಣೆ, ದೃಢತೆ, ವಿಶ್ವಾಸ ಹಾಗೂ ಪ್ರೀತಿ ಮೂಲಕ ಅಮೆರಿಕದ ಮುನ್ನಡೆಯ ಹಾದಿಯಲ್ಲಿ ದೀಪ ಬೆಳಗಲು ಭಾರತೀಯ–ಅಮೆರಿಕನ್‌ ಸಮುದಾಯವು ನಮಗೆ ಸಹಾಯ ಮಾಡಿದೆ’ ಎಂದು ಅಮೆರಿಕ ಪ್ರಥಮ ಮಹಿಳೆ ಜಿಲ್‌ ಬೈಡನ್‌ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಕೂಟದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.