ADVERTISEMENT

ಮತ್ತೆ ವಿವಾದದಲ್ಲಿ ತ್ರಿಪುರ ಮುಖ್ಯಮಂತ್ರಿ ಬಿಪ್ಲವ್‌ ದೇವ್

ಅಮಾಯಕರ ಮೇಲೆ ನಡೆಯುತ್ತಿರವ ಹಲ್ಲೆ ಪ್ರಶ್ನೆಗೆ ‘ಖುಷಿಯಾಗ್ತಿದೆ’ ಎಂದು ಉತ್ತರಿಸಿದರಂತೆ ಸಿಎಂ

ಏಜೆನ್ಸೀಸ್
Published 6 ಜುಲೈ 2018, 6:31 IST
Last Updated 6 ಜುಲೈ 2018, 6:31 IST
ಬಿಪ್ಲವ್‌ ದೇವ್‌ –ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್‌
ಬಿಪ್ಲವ್‌ ದೇವ್‌ –ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್‌   

ಅಗರ್ತಲಾ: ತ್ರಿಪುರದಲ್ಲಿ ಮಕ್ಕಳ ಕಳ್ಳರೆಂದು ಅಮಾಯಕರ ಮೇಲೆ ನಡೆಯುತ್ತಿರುವ ಸರಣಿ ಹಲ್ಲೆ, ಹತ್ಯೆಗಳ ಕುರಿತು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಮುಖ್ಯಮಂತ್ರಿ ಬಿಪ್ಲವ್‌ ದೇವ್‌ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವದಂತಿಯಿಂದ ನಡೆದ ಹಲ್ಲೆಗಳ ಕುರಿತ ಕೇಳಿದಾಗ, ‘ತ್ರಿಪುರದಲ್ಲಿ ಸಂತಸದ ಅಲೆಗಳು ಎದ್ದಿವೆ, ನೀವೂ ಅವುಗಳನ್ನು ಎಂಜಾಯ್‌ ಮಾಡಿ. ಆಗ ನಿಮಗೂ ಸಂತಸವಾಗುತ್ತದೆ. ನೋಡಿ ನನ್ನ ಮುಖ... ನಾನು ತುಂಬ ಸಂತಸವಾಗಿದ್ದೇನೆ’ ಎಂದು ಬುಧವಾರ ಪ್ರತಿಕ್ರಿಯಿಸಿದ್ದರು.

ವದಂತಿಗಳಿಂದ ಕಳೆದ ಎಂಟು ದಿನಗಳಲ್ಲಿ ನಡೆದ ಹಲ್ಲೆಗಳಲ್ಲಿ ರಾಜ್ಯದಲ್ಲಿ ಮೂವರ ಹತ್ಯೆಯಾಗಿದೆ.

ADVERTISEMENT

ಗಾಳಿಸುದ್ದಿಗಳನ್ನು ನಂಬದಂತೆ ಜನರಲ್ಲಿ ಜಾಗೃತಿ ಮೂಡಿಸಲು ಇಲ್ಲಿನ ಸರ್ಕಾರವೇ ಕೆಲ ಕಾರ್ಯಕರ್ತರನ್ನು ನಿಯೋಜಿಸಿತ್ತು. ಕಲಚೆರಾ ಎಂಬಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದ ಕಾರ್ಯಕರ್ತನನ್ನೆ ಜನರು ಜೂನ್‌ 28ರಂದು ಹೊಡೆದು ಕೊಂದರು. ಅದೇ ದಿನ ಉತ್ತರಪ್ರದೇಶದಿಂದ ಹೊಟ್ಟೆಹೊರೆಯಲು ಬಂದುಪಶ್ಚಿಮದ ತ್ರಿಪುರದ ಗಾರ್ಮೆಂಟ್‌ನಲ್ಲಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಜನ ತಳಿಸಿದ್ದರು. ಈ ಹಲ್ಲೆ ನಡೆದ ಒಂದು ದಿನದ ಹಿಂದೆಯೇ ಸೆಪಾಯಿಜಲ ಜಿಲ್ಲೆಯಲ್ಲಿ ಇದೇ ಆರೋಪದ ಮೇಲೆ ಅಲೆಮಾರಿ ಮಹಿಳೆಯೊಬ್ಬರನ್ನು ಹೊಡೆದು ಸಾಯಿಸಲಾಗಿತ್ತು.

ಮುಖ್ಯಮಂತ್ರಿಯ ಮಾತುಗಳಿಂದ ವಿವಾದವಾಗುತ್ತಿದ್ದಂತೆ, ರಾಜ್ಯ ಸರ್ಕಾರ ಸ್ಪಷ್ಟನೆಯ ಪ್ರಕಟಣೆ ಹೊರಡಿಸಿದೆ.

‘ಮುಖ್ಯಮಂತ್ರಿ ಅವರ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಅಗರ್ತಲಾದ ವಿಮಾನ ನಿಲ್ದಾಣಕ್ಕೆ ಮಹಾರಾಜ ಬಿರ್‌ ಬಿಕ್ರಮ್‌ ಮಾಣಿಕ್ಯ ಕಿಶೋರ್‌ ಎಂದು ಮರುನಾಮಕರಣ ಮಾಡಿದ್ದರಿಂದ ಸಂತಸದ ಅಲೆಗಳು ಎದ್ದಿವೆ ಎಂದು ಅವರು ಹೇಳಿದ್ದರು. ದುರಾದೃಷ್ಟಾವತ್ ಅವರ ಹೇಳಿಕೆಯನ್ನು ಛೀಮಾರಿ ಹಾಕಬಹುದಾದ ಹಲ್ಲೆಗಳಿಗೆ ಜೋಡಿಸಲಾಗಿದೆ’ ಎಂದು ವಾರ್ತಾ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

48 ವರ್ಷ ವಯೋಮಾನದ ಬಿಪ್ಲವ್‌ ದೇವ್‌ ವಿವಾದದ ಸುಳಿಯಲ್ಲಿ ಸಿಲುಕುತ್ತಿರುವುದು ಇದೇ ಮೊದಲೆನಲ್ಲ.

ಇವರು ಈ ಹಿಂದೆ ಮಹಾಭಾರತದ ಕಾಲದಲ್ಲಿಯೇ ಇಂಟರ್‌ನೆಟ್‌ ಮತ್ತು ಉಪಗ್ರಹ ತಂತ್ರಜ್ಞಾನವಿತ್ತು. ಮಾಜಿ ವಿಶ್ವ ಸುಂದರಿ ಹಾಗೂ ಭಾರತೀಯ ನಟಿಯಾಗಿರುವ ಡಯಾನಾ ಹೆಡನ್‌ ದೇಶದ ಮಹಿಳೆಯರ ಸೌಂದರ್ಯವನ್ನು ಪ್ರತಿನಿಧಿಸಲಾರರು ಎಂದಿದ್ದರು. ಈ ಹೇಳಿಕೆಗಳಿಗೆ ಹಲವಾರು ಜನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.