ಗುವಾಹಟಿ: ಗಾಯಕ ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಐವರನ್ನು ನ್ಯಾಯಾಂಗ ಬಂಧನಕ್ಕೆ ಬುಧವಾರ ಒಪ್ಪಿಸಲಾಗಿದೆ.
ಈಶಾನ್ಯ ಭಾರತ ಉತ್ಸವದ ಮುಖ್ಯ ಆಯೋಜಕ ಶ್ಯಾಮಕನು ಮಹಾಂತ, ಜುಬೀನ್ ಅವರ ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ, ಅವರ ಸಹೋದರ ಸಂಬಂಧಿ, ಪೊಲೀಸ್ ಅಧಿಕಾರಿ ಸಂದೀಪನ್ ಗರ್ಗ್ ಮತ್ತು ಅವರ ಭದ್ರತಾ ಅಧಿಕಾರಿ ನಂದೇಶ್ವರ ಬೋರಾ ಮತ್ತು ಪ್ರಬಿನ್ ಬೈಶ್ಯಾ ಅವರನ್ನು ಕಾಮರೂಪ್ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಆರೋಪಿಗಳ ಭದ್ರತೆ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿ, ಕಡಿಮೆ ಕೈದಿಗಳಿರುವ ಕಾರಾಗೃಹಕ್ಕೆ ಅವರನ್ನು ಕಳುಹಿಸುವಂತೆ ಸೂಚಿಸಿತು.
‘ಆರೋಪಿಗಳನ್ನು ಮುಸ್ಸಲಾಪುರದ ಬಕ್ಸಾದಲ್ಲಿರುವ ಕಾರಾಗೃಹದಲ್ಲಿರಿಸಲು ನಿರ್ಧರಿಸಲಾಗಿದೆ. ಇದು ಎರಡು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದೆ. ಅಲ್ಲಿ ಯಾವುದೇ ಕೈದಿ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮತ್ತೆ ಮೂವರು ವಿಚಾರಣೆಗೆ ಹಾಜರು
ಗುವಾಹಟಿ: ಜುಬೀನ್ ಅವರ ಸಾವಿಗೆ ಸಂಬಂಧಿಸಿದಂತೆ ಸಿಂಗಪುರದಲ್ಲಿ ನೆಲಸಿರುವ ಅಸ್ಸಾಂನ ಮೂವರು ಬುಧವಾರ ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾದರು ಎಂದು ಅಸ್ಸಾಂನ ವಿಶೇಷ ಪೊಲೀಸ್ ಮಹಾನಿರ್ದೇಶಕ ಮುನ್ನಾ ಪ್ರಸಾದ್ ಗುಪ್ತಾ ಅವರು ತಿಳಿಸಿದರು. ಸುಷ್ಮಿತಾ ಗೋಸ್ವಾಮಿ ಪ್ರತೀಮ್ ಭುಯಾನ್ ಮತ್ತು ದೇಬೋಜ್ಯೋತಿ ಹಜಾರಿಕಾ ಅವರು ಸಿಐಡಿ ಕಚೇರಿಗೆ ಬಂದು ಹೇಳಿಕೆ ನೀಡಿದರು ಎಂದು ಅವರು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಗೆ ಸಮನ್ಸ್ ನೀಡಲಾಗಿತ್ತು. ಈ ಪೈಕಿ 10 ಮಂದಿ ವಿಚಾರಣೆ ಎದುರಿಸಿದ್ದಾರೆ ಎಂದು ಮಾಹಿತಿ ನೀಡಿದರು.