ADVERTISEMENT

ಅಸ್ಸಾಂ: ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 14:41 IST
Last Updated 13 ಮಾರ್ಚ್ 2023, 14:41 IST
.
.   

ಗುವಾಹಟಿ (ಪಿಟಿಐ): ರಾಜ್ಯ ಪರೀಕ್ಷಾ ಮಂಡಳಿಯ 10ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಸಾಮಾನ್ಯ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಸೋಮವಾರ ರಾಜ್ಯ ಶಿಕ್ಷಣ ಸಚಿವ ರನೋಜ್ ಪೆಗು ತಿಳಿಸಿದ್ದಾರೆ.

ಈ ಸಂಬಂಧ ದೂರು ದಾಖಲಿಸಲಾಗಿದ್ದು, ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ರದ್ದಾಗಿರುವ ಪರೀಕ್ಷೆಯನ್ನು ಮಾರ್ಚ್‌ 30ರಂದು ನಡೆಸಲಾಗುವುದು. ವಿದ್ಯಾರ್ಥಿಗಳು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಶಿಕ್ಷಕರ ಕೈವಾಡ ಇಲ್ಲ. ಏಕೆಂದರೆ ಪ್ರಶ್ನೆಪತ್ರಿಕೆಗಳನ್ನು ಪೊಲೀಸ್‌ ಠಾಣೆಯಲ್ಲಿ ಇಡಲಾಗಿತ್ತು. ಪರೀಕ್ಷೆ ನಡೆಯುವ ದಿನದಂದು ಬೆಳಗ್ಗೆ ಪರೀಕ್ಷಾ ಸ್ಥಳಕ್ಕೆ ತರಲಾಗುತ್ತಿತ್ತು. ಭಾನುವಾರ ರಾತ್ರಿ ಅಸ್ಸಾಂ ಪ್ರೌಢ ಶಿಕ್ಷಣ ಮಂಡಳಿಗೆ (ಎಸ್‌ಇಬಿಎ) ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಕುರಿತು ಮಾಹಿತಿ ದೊರಕಿದ್ದರಿಂದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಇದರ ಹಿಂದಿರುವ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ಈ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಪೆಗು ಅವರ ರಾಜೀನಾಮೆಗೆ ಒತ್ತಾಯಿಸಿವೆ. ಕಾಂಗ್ರೆಸ್‌ ಅಧ್ಯಕ್ಷ ಕಮಲಾಕ್ಯ ಡೇ ಪುರ್ಕಾಯಸ್ಥ ಮಾತನಾಡಿ, ‘ಅಸ್ಸಾಂನಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ. ಪರೀಕ್ಷೆ ರದ್ದತಿಯಿಂದಾಗಿ ರಾಜ್ಯದ 4 ಲಕ್ಷ ವಿದ್ಯಾರ್ಥಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಇಷ್ಟೆಲ್ಲಾ ಆದರೂ ಶಿಕ್ಷಣ ಮಂತ್ರಿ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾರೆ. ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದಿದ್ದಾರೆ.

ಸಿಪಿಐ(ಎಂ) ಸಚಿವ ಮನೋರಂಜನ್‌ ತಾಲೂಕ್‌ದಾರ್‌ ಮಾತನಾಡಿ, 'ಈ ಘಟನೆಯು ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರದ ಒಟ್ಟಾರೆ ವೈಫಲ್ಯವನ್ನು ತೋರುತ್ತದೆ. ಇದೆಲ್ಲದಕ್ಕೂ ಶಿಕ್ಷಣ ಸಚಿವರೇ ನೇರ ಹೊಣೆಯಾಗಿರುವುದರಿಂದ ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.