ADVERTISEMENT

ಅಸ್ಸಾಂ| ವಿರೋಧದ ಮಧ್ಯೆ ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆ: 2,441 ಮಂದಿ ಬಂಧನ

ಪಿಟಿಐ
Published 6 ಫೆಬ್ರುವರಿ 2023, 5:51 IST
Last Updated 6 ಫೆಬ್ರುವರಿ 2023, 5:51 IST
ಬಾಲ್ಯ ವಿವಾಹ ನಿಯಂತ್ರಣ ಕಾಯ್ದೆ ಅಡಿ ಬಂಧನಕ್ಕೊಳಗಾದವರ ಕುಟುಂಬ ಸದಸ್ಯರ ರೋಧನ (ಎಎಫ್‌ಪಿ ಚಿತ್ರ)
ಬಾಲ್ಯ ವಿವಾಹ ನಿಯಂತ್ರಣ ಕಾಯ್ದೆ ಅಡಿ ಬಂಧನಕ್ಕೊಳಗಾದವರ ಕುಟುಂಬ ಸದಸ್ಯರ ರೋಧನ (ಎಎಫ್‌ಪಿ ಚಿತ್ರ)   

ಗುವಾಹಟಿ: ಪ್ರತಿಪಕ್ಷಗಳ ಟೀಕೆ ಮತ್ತು ಪ್ರತಿಭಟನೆಗಳ ನಡುವೆಯೇ ಅಸ್ಸಾಂ ಪೊಲೀಸರು ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಒಟ್ಟು 2,441 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಪಿಡುಗನ್ನು ಕೊನೆಗೊಳಿಸುವ ಕಾರ್ಯಾಚರಣೆಯು ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಚಾಲ್ತಿಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಸ್ಪಷ್ಟಪಡಿಸಿದ್ದರು. ಆದರೆ, ಇದು ತರಾತುರಿಯಲ್ಲಿ ನಡೆಸಿದ ಪ್ರಚಾರದ ಕಸರತ್ತು ಎಂದು ಪ್ರತಿಪಕ್ಷಗಳು ಟೀಕಿಸಿವೆ.

ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ರಾಜ್ಯಾದ್ಯಂತ 4,074 ಎಫ್‌ಐಆರ್‌ಗಳು ದಾಖಲಾಗಿದ್ದು, ಅದರ ಆಧಾರದಲ್ಲಿ ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಿಸ್ವನಾಥ್ ಜಿಲ್ಲೆಯಲ್ಲಿ ಕನಿಷ್ಠ 139 ಜನರನ್ನು ಬಂಧಿಸಲಾಗಿದೆ, ಬರ್ಪೇಟಾದಲ್ಲಿ 130 ಮತ್ತು ಧುಬ್ರಿಯಲ್ಲಿ 126, ಬಕ್ಸಾದಲ್ಲಿ 123, ಬೊಂಗೈಗಾಂವ್ ಮತ್ತು ಹೊಜೈನಲ್ಲಿ ತಲಾ 117 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.

ಬಾಲ್ಯ ವಿವಾಹಗಳ ವಿರುದ್ಧ ಧುಬ್ರಿಯಲ್ಲಿ ಅತಿ ಹೆಚ್ಚು (374) ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹೊಜೈ (255) ಮತ್ತು ಮೊರಿಗಾಂವ್ (224) ನಂತರದ ಸ್ಥಾನದಲ್ಲಿವೆ.

ಕಾರ್ಯಾಚರಣೆ ವಿರುದ್ಧ ಬರಾಕ್ ಕಣಿವೆಯ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿವೆ.

ಕಾರ್ಯಾಚರಣೆ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ‘ಬಾಲ್ಯ ವಿವಾಹದ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸುವ ಮನಸ್ಸಿದ್ದಿದ್ದರೆ ಅಸ್ಸಾಂ ಸರ್ಕಾರವು ಸಾಕ್ಷರತೆಯ ಮಟ್ಟವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಬಾಲ್ಯವಿವಾಹಗಳನ್ನು ನಿಲ್ಲಿಸಬೇಕಾದರೆ ಶಾಲೆಗಳನ್ನು ತೆರೆಯಬೇಕು ಎಂದು ತಜ್ಞರು ಹೇಳಿದ್ದಾರೆ, (ಆದರೆ) ನೀವು ಅದನ್ನು ಮಾಡಿಲ್ಲ. ಮದರಸಾಗಳನ್ನೂ ಮುಚ್ಚಿದ್ದೀರಿ’ ಎಂದು ಅವರು ಆರೋಪಿಸಿದ್ದಾರೆ.

ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಮಾತನಾಡಿ, ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಮಾನವೀಯ ನಡೆ ಅನುಸರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

‘ ಬಾಲ್ಯ ವಿವಾಹವನ್ನು ಕಾಂಗ್ರೆಸ್‌ ವಿರೋಧಿಸುತ್ತದೆ. ಆದರೆ ಬೆಳೆದ ಮಕ್ಕಳೊಂದಿಗೆ ನೆಲೆಸಿರುವ ಕುಟುಂಬಗಳಲ್ಲಿ ನೆಮ್ಮದಿ ಕದಡುವುದರಿಂದ ಏನು ಪ್ರಯೋಜನ? ಇದು ಪ್ರಚಾರದ ಸ್ಟಂಟ್ ಹೊರತು ಬೇರೇನೂ ಅಲ್ಲ’ ಎಂದು ಅವರು ಹೇಳಿದರು.

ಇವುಗಳನ್ನೂ ಓದಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.