
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಮಂಗಳವಾರ ವಿಧಾನಸಭೆಯಲ್ಲಿ ಬಹು ಪತ್ನಿತ್ವ ನಿಷೇಧ ಮಸೂದೆಯನ್ನು ಮಂಡನೆ ಮಾಡಿದ್ದಾರೆ. ಬಹಪತ್ನಿತ್ವವನ್ನು ಅಪರಾಧ ಎಂದು ಪರಿಗಣಿಸಿ ಏಳು ವರ್ಷದವರೆಗೆ ಜೈಲು ಮತ್ತು ದಂಡ ವಿಧಿಸುವ ಅವಕಾಶಗಳನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.
ಪರಿಶಿಷ್ಟ ಪಂಗಡದವರು(ಎಸ್‌ಟಿ) ಮತ್ತು 6ನೇ ಪರಿಚ್ಛೇದದ (ಶೆಡ್ಯೂಲ್) ಅಡಿ ಬರುವ ಪ್ರದೇಶಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
‘ಅಸ್ಸಾಂನಲ್ಲಿ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆ–2025’ ಅನ್ನು ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಮಂಡಿಸಿದರು. ಗಾಯಕ ಜುಬೀನ್ ಗರ್ಗ್ ಸಾವು ಪ್ರಕರಣದ ಚರ್ಚೆ ನಂತರ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದರು. ಹೀಗಾಗಿ ಮಸೂದೆ ಮಂಡಿಸುವಾಗ ಕಾಂಗ್ರೆಸ್, ಸಿಪಿಎಂ, ರಾಯ್‌ಜೋರ್ ದಳದ ಶಾಸಕರು ಹಾಜರಿರಲಿಲ್ಲ.
‘ಬಹುಪತ್ನಿತ್ವ ನಿರ್ಬಂಧಿಸುವ ಮತ್ತು ಬಹುಪತ್ನಿತ್ವ ವಿವಾಹಗಳನ್ನು ತೊಲಗಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಈಗಾಗಲೇ ವೈವಾಹಿಕ ಜೀವನ ನಡೆಸುತ್ತಿರುವ ವ್ಯಕ್ತಿ ಇನ್ನೊಂದು ಮದುವೆ ಆಗುವುದು, ಕಾನೂನುಬದ್ಧವಾಗಿ ವಿಚ್ಛೇದನ ಪಡೆಯದೇ ಇರುವ, ಮದುವೆ ರದ್ದಾಗದೇ ಇರುವ ಆತ/ಆಕೆಯ ಜೊತೆ ವೈವಾಹಿಕ ಜೀವನ ನಡೆಸುವುದನ್ನು ಮಸೂದೆಯು ಬಹುಪತ್ನಿತ್ವ ಎಂದು ಪರಿಗಣಿಸುತ್ತದೆ’ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
ಮಸೂದೆಯ ಪ್ರಮುಖ ಅಂಶಗಳು
ಬಹುಪತ್ನಿತ್ವ ಕಾಯ್ದೆಯಡಿ ಅಪರಾಧಿ ಎಂದು ಸಾಬೀತಾದರೆ 7 ವರ್ಷ ಜೈಲು ಮತ್ತು ದಂಡ
ವಿವಾಹ ಮುಚ್ಚಿಟ್ಟು ಮತ್ತೊಂದು ಮದುವೆಯಾದರೆ 10 ವರ್ಷ ಜೈಲು ದಂಡ
ಪದೇಪದೇ ಇಂತಹ ಅಪರಾಧ ಎಸಗಿದರೆ ಪ್ರತಿ ಅಪರಾಧಕ್ಕೆ ದುಪ್ಪಟ್ಟು ಶಿಕ್ಷೆ
ಇಂತಹ ಮದುವೆಗೆ ಸಾಕ್ಷಿಯಾಗುವ ಹಳ್ಳಿಯ ಪ್ರಮುಖ ಅರೆನ್ಯಾಯಿಕ ಸಂಸ್ಥೆ ಪೋಷಕರಿಗೂ ಶಿಕ್ಷೆ
ಎರಡು ವರ್ಷದವರೆಗೆ ಜೈಲು ಮತ್ತು ₹1.50 ಲಕ್ಷದವರೆಗೂ ದಂಡ ವಿಧಿಸಬಹುದು
ಬಹುಪತ್ನಿತ್ವ ಅಪರಾಧದಡಿ ಶಿಕ್ಷೆಗೆ ಗುರಿಯಾದ ವ್ಯಕ್ತಿ ಸರ್ಕಾರಿ ಉದ್ಯೋಗಕ್ಕೆ ಅರ್ಹನಲ್ಲ
ರಾಜ್ಯ ಸರ್ಕಾರಿ ಉದ್ಯೋಗ ಮತ್ತು ನೇಮಕಾತಿಗೂ ಪರಿಗಣಿಸುವುದಿಲ್ಲ
ಶಿಕ್ಷೆಗೆ ಗುರಿಯಾದ ವ್ಯಕ್ತಿ ರಾಜ್ಯ ಸರ್ಕಾರಿ ಯೋಜನೆಗಳ ಫಲಾನುಭವಿ ಆಗಲು ಅರ್ಹನಲ್ಲ
ಪಂಚಾಯ್ತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲೂ ಅರ್ಹನಾಗಿರುವುದಿಲ್ಲ
ವಂಚನೆಗೆ ಒಳಗಾದ ಮಹಿಳೆಗೆ ಪರಿಹಾರ ನೀಡುವ ಅಂಶ ಮಸೂದೆಯಲ್ಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.