ನವದೆಹಲಿ: ‘ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು’ ಎಂಬ, ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ವಿರೋಧ ಪಕ್ಷಗಳ ಪಾಳಯದಿಂದ ಶುಕ್ರವಾರ ಭಾರಿ ಟೀಕೆ ವ್ಯಕ್ತವಾಗಿದೆ.
ಈ ಹೇಳಿಕೆ ವಿಚಾರವಾಗಿ ಆರ್‌ಎಸ್‌ಎಸ್ ಮೇಲೆ ಮುಗಿಬಿದ್ದಿರುವ ವಿಪಕ್ಷಗಳು,‘ಆರ್‌ಎಸ್‌ಎಸ್ ಎಂದಿಗೂ ದೇಶದ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಇದು, ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯನ್ನು ನಾಶ ಮಾಡಬೇಕು ಹಾಗೂ ಮನುಸ್ಕೃತಿ ಪ್ರತಿಪಾದಿಸುವ ಪ್ರಾಚೀನ ಚೌಕಟ್ಟನ್ನು ಮತ್ತೆ ಹೇರಬೇಕು ಎನ್ನುವ ಪಿತೂರಿಯ ಭಾಗವಾಗಿರುವ ಹೊಸದಾದ ಕರೆ’ ಎಂದು ಟೀಕಾಪ್ರಹಾರ ನಡೆಸಿವೆ.
‘ಭಾರತದ ಮೂಲಭೂತ ಮೌಲ್ಯಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಪ್ರತಿರೋಧಿಸಬೇಕು’ ಎಂದೂ ವಿರೋಧ ಪಕ್ಷಗಳು ಕರೆ ನೀಡಿವೆ.
‘ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರ್ಪಡೆ ಮಾಡಿರುವುದು ಮನಸ್ಸಿಗೆ ತೋಚಿದಂತೆ ಕೈಗೊಂಡ ನಿರ್ಧಾರವಲ್ಲ. ಸ್ವಾತಂತ್ರ್ಯ ಹೋರಾಟಗಾರರು ಪ್ರತಿಪಾದಿಸುತ್ತಿದ್ದ ಮೌಲ್ಯಗಳನ್ನು ಈ ಪದಗಳು ಪ್ರತಿಫಲಿಸುತ್ತವೆ’ ಎಂದೂ ಹೇಳಿವೆ.
ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ದತ್ತಾತ್ರೇಯ ಹೊಸಬಾಳೆ, ‘ಸಂವಿಧಾನದ ಪ್ರಸ್ತಾವನೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು. ತುರ್ತುಪರಿಸ್ಥಿತಿ ಅವಧಿಯಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಈ ಪದಗಳನ್ನು ಸೇರ್ಪಡೆಗೊಳಿಸಿತ್ತು’ ಎಂದು ಹೇಳಿದ್ದರು.
ಕಾಂಗ್ರೆಸ್ ಟೀಕೆ: ‘ದತ್ತಾತ್ರೇಯ ಹೊಸಬಾಳೆ ಅವರ ಈ ಹೇಳಿಕೆ ಕೇವಲ ಸಲಹೆಯಲ್ಲ, ಅದು ಸಂವಿಧಾನದ ಆತ್ಮದ ಮೇಲಿನ ಉದ್ಧೇಶಪೂರ್ವಕ ದಾಳಿ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ.
‘ಸಂವಿಧಾನವನ್ನು ಮರುರಚನೆ ಮಾಡಬೇಕು ಎನ್ನುವ ತಮ್ಮ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ವೇಳೆ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಈ ಉದ್ಧೇಶ ಈಡೇರಿಕೆಗೆ 400ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲಬೇಕು ಎಂದೂ ಹೇಳಿದ್ದರು.’
‘ಬಿಜೆಪಿಯ ಕಾರ್ಯಸೂಚಿಯನ್ನು ಅರ್ಥ ಮಾಡಿಕೊಂಡ ಭಾರತೀಯರು ತಕ್ಕ ಉತ್ತರವನ್ನೇ ನೀಡಿದರು. ಈಗ, ಅವರು ತಮ್ಮ ಹಳೇ ಬೇಡಿಕೆಯನ್ನೇ ಮತ್ತೆ ಮುಂದಿಟ್ಟಿದ್ಧಾರೆ. ಆದರೆ, ಸಂವಿಧಾನವನ್ನು ಬುಡಮೇಲು ಮಾಡುವಂತಹ ಯಾವುದೇ ಪ್ರಯತ್ನದ ವಿರುದ್ಧ ಕಾಂಗ್ರೆಸ್ ಪಕ್ಷ ಅಭೇದ್ಯ ಗೋಡೆಯಾಗಿ ನಿಲ್ಲಲಿದೆ. ಜೈ ಸಂವಿಧಾನ’ ಎಂದು ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಆರ್‌ಎಸ್‌ಎಸ್ ಭಾರತದ ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಸಂವಿಧಾನ ರಚನೆಯಲ್ಲಿ ಶ್ರಮಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ನೆಹರೂ ಹಾಗೂ ಇತರರ ಮೇಲೆ 1949ರ ನವೆಂಬರ್ 30ರಿಂದಲೂ ಆರ್‌ಎಸ್‌ಎಸ್ ದಾಳಿ ನಡೆಸುತ್ತಲೇ ಇದೆ’ ಎಂದು ಟೀಕಿಸಿದ್ದಾರೆ.
‘ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯಬೇಕು ಎಂಬ ವಿಚಾರ ಕುರಿತು ಕಳೆದ ವರ್ಷ ನವೆಂಬರ್ 25ರಂದು ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ’ ಎಂದಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿಯನ್ನು ಕೂಡ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ‘ಹೊಸಬಾಳೆಯವರು ಈ ತೀರ್ಪನ್ನು ಓದಲಿ’ ಎಂದಿದ್ದಾರೆ.
ವಿಪಕ್ಷಗಳ ನಾಯಕರ ಪ್ರತಿಕ್ರಿಯೆ
ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಿದ್ಧಾಂತವು ದೇಶದ ಸಂವಿಧಾನ ಪ್ರತಿಪಾದಿಸುವ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿವೆಕಾಂಗ್ರೆಸ್ (ಪಕ್ಷದ ‘ಎಕ್ಸ್’ ಖಾತೆಯಲ್ಲಿನ ಪೋಸ್ಟ್)
ಆರ್‌ಎಸ್‌ಎಸ್‌ನ ಕರೆ ನಮ್ಮ ಗಣತಂತ್ರದ ಮುಖ್ಯ ಆಶಯಗಳನ್ನು ನಾಶ ಮಾಡುವುದೇ ಆಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತನ್ನ ಅಸ್ತಿತ್ವಕ್ಕಾಗಿ ಆರ್‌ಎಸ್‌ಎಸ್ ಇಂದಿರಾ ಗಾಂಧಿ ಅವರ ಜೊತೆ ಕೈಜೋಡಿಸಿತ್ತು. ಸಂವಿಧಾನವನ್ನು ಬುಡಮೇಲು ಮಾಡುವುದಕ್ಕಾಗಿ ತುರ್ತು ಪರಿಸ್ಥಿತಿ ಹೇರಿದ್ದ ಆಗಿನ ಸಂದರ್ಭವನ್ನು ಬಳಸಿಕೊಳ್ಳುವುದು ಅದರ ಬೂಟಾಟಿಕೆ ಮತ್ತು ರಾಜಕೀಯ ಅವಕಾಶವಾದಿತನವನ್ನು ತೋರಿಸುತ್ತದೆಪಿಣರಾಯಿ ವಿಜಯನ್ ಕೇರಳ ಮುಖ್ಯಮಂತ್ರಿ
ನಾಗ್ಪುರದಲ್ಲಿ (ಆರ್‌ಎಸ್‌ಎಸ್ ಕೇಂದ್ರ ಕಚೇರಿ) ಮುದ್ರಿತವಾದದ್ದು ಕಾರ್ಯರೂಪಕ್ಕೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ನೀವು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಓದಬೇಕು. ಸಮಾಜವಾದ ಮತ್ತು ಜಾತ್ಯತೀತ ಮೌಲ್ಯಗಳು ಸಂವಿಧಾನದ ಅವಿಭಾಜ್ಯ ಭಾಗಗಳೇ ಆಗಿವೆ. ಬಹುಶಃ ಈ ಬಗ್ಗೆ ಅವರು ಓದಿಲ್ಲಮನೋಜ್ಕುಮಾರ್ ಝಾ ಆರ್‌ಜೆಡಿ ಸಂಸದ
ತ್ರಿವರ್ಣ ಧ್ವಜದ ಬದಲಾಗಿ ಕೇಸರಿ ಬಾವುಟವನ್ನು ಹಾರಿಸಬೇಕು ಎಂಬುದಾಗಿ ಕೇರಳದಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್ ಮುಖಂಡರೊಬ್ಬರು ಬೇಡಿಕೆ ಇಟ್ಟಿದ್ದರು. ಇದು ರಾಷ್ಟ್ರೀಯ ಚಿಹ್ನೆಗಳಿಗೆ ಅವರು ತೋರುವ ಅಗೌರವವನ್ನು ಬಹಿರಂಗಪಡಿಸಿದೆ. ಸಂವಿಧಾನದ ಮೂಲಭೂತ ಮೌಲ್ಯಗಳ ಮೇಲಿನ ಈ ನಿರಂತರ ದಾಳಿಗೆ ಅಚಲ ಪ್ರತಿರೋಧ ಒಡ್ಡುವುದು ಅಗತ್ಯಜಾನ್ ಬ್ರಿಟ್ಟಾಸ್ ಸಿಪಿಎಂ ರಾಜ್ಯಸಭಾ ಸಂಸದ
ಸಂವಿಧಾನವನ್ನು ಬುಡಮೇಲು ಮಾಡಬೇಕು ಹಾಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಆರ್‌ಎಸ್‌ಎಸ್‌ನ ಬಹುದಿನದ ಗುರಿ. ದತ್ತಾತ್ತೇಯ ಹೊಸಬಾಳೆ ಅವರ ಹೇಳಿಕೆ ಈ ಪಿತೂರಿಯನ್ನು ಬಹಿರಂಗಪಡಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಆರ್‌ಎಸ್‌ಎಸ್ ಈಗ ಸಂವಿಧಾನದಲ್ಲಿನ ಮೂಲಭೂತ ತತ್ವಗಳನ್ನು ತೆಗೆದುಹಾಕಲು ಸಲಹೆ ನೀಡುತ್ತಿದೆ.ಸಿಪಿಎಂ ಪಾಲಿಟ್ ಬ್ಯುರೊ
ಸಂವಿಧಾನದ ಮೂಲ ಆಶಯ ಮರುಸ್ಥಾಪನೆ ಉದ್ದೇಶ: ಆರ್ಗನೈಜರ್
‘ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು’ ಎಂಬ ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಜರ್’ ಶುಕ್ರವಾರ ಸಮರ್ಥಿಸಿಕೊಂಡಿದೆ. ‘ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯಲ್ಲಿ ಸಂವಿಧಾನವನ್ನು ಬುಡಮೇಲು ಮಾಡುವ ಉದ್ದೇಶವಿಲ್ಲ. ಸಂವಿಧಾನದ ‘ಮೂಲ ಆಶಯ’ ಮರುಸ್ಥಾಪಿಸಬೇಕು ಹಾಗೂ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ನೀತಿಯ ಭಾಗವಾಗಿ ಮಾಡಿದ್ದ ‘ವಿರೂಪ’ಗಳಿಂದ ಸಂವಿಧಾನ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದ ಈ ಮಾತು ಹೇಳಿದ್ದಾರೆ’ ಎಂದು ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಹೇಳಲಾಗಿದೆ.
ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳ ಅಂಶಗಳನ್ನು ಉಲ್ಲೇಖಿಸಿರುವ ಪತ್ರಿಕೆ ‘ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿರುವ ಪ್ರಜಾತಾಂತ್ರಿಕ ತತ್ವಗಳನ್ನು ಹೊಸಬಾಳೆ ಅವರ ಮಾತುಗಳು ಪ್ರತಿಧ್ವನಿಸುತ್ತವೆ’ ಎಂದಿದೆ. ‘ಭಾರತವನ್ನು ‘ಜಾತ್ಯತೀತ ಹಾಗೂ ಸಮಾಜವಾದಿ ರಾಜ್ಯಗಳ ಒಕ್ಕೂಟ’ವೆಂದು ಘೋಷಿಸಬೇಕು ಎಂಬ ಪ್ರಸ್ತಾವವನ್ನು ಸಂವಿಧಾನ ರಚನಾ ಸಭೆ 1948ರಲ್ಲಿ ತಿರಸ್ಕರಿಸಿತ್ತು’ ಎಂದು ಲೇಖನದಲ್ಲಿ ವಿವರಿಸಲಾಗಿದೆ. ‘ಕಾಂಗ್ರೆಸ್ ಸರ್ಕಾರ ತಂದ 42ನೇ ತಿದ್ದುಪಡಿ ರಾಜಕೀಯ ತಂತ್ರಗಾರಿಕೆಯಾಗಿತ್ತೇ ಹೊರತು ಸಂವಿಧಾನ ರಚನಾ ಸಭೆಯ ಆಶಯವಾಗಿರಲಿಲ್ಲ. ಭಾರತದ ಭವಿಷ್ಯದ ಪೀಳಿಗೆಗಳನ್ನು ಸಶಕ್ತಗೊಳಿಸಬಲ್ಲ ಪ್ರಜಾಸತ್ತಾತ್ಮಕ ಚೌಕಟ್ಟು ಕುರಿತು ಅಂಬೇಡ್ಕರ್ ಹೊಂದಿದ್ದ ದೂರದೃಷ್ಟಿಗೆ ಅನುಗುಣವಾಗಿ ಸಂವಿಧಾನ ಇರಬೇಕು ಎಂಬುದು ಹೊಸಬಾಳೆ ಅವರ ಉದ್ದೇಶವಾಗಿದೆ. ಈ ವಿಚಾರವಾಗಿ ಮುಕ್ತ ಮಾತುಕತೆ ಬಯಸಿ ಅವರು ಈ ಹೇಳಿಕೆ ನೀಡಿದ್ದಾರೆ’ ಎಂದೂ ಹೇಳಿದೆ.
ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ: ರಾಹುಲ್
‘ಸಂಘಟನೆಯ ಸರಕಾರ್ಯವಾಹ ದತ್ತಾತ್ತೇಯ ಹೊಸಬಾಳೆ ಅವರ ಹೇಳಿಕೆಯಿಂದ ಆರ್‌ಎಸ್‌ಎಸ್ ಮುಖವಾಡ ಮತ್ತೊಮ್ಮೆ ಕಳಚಿದೆ. ಸಂವಿಧಾನದ ಬದಲು ಮನುಸ್ಮೃತಿ ಜಾರಿಗೊಳ್ಳಬೇಕು ಎಂಬುದೇ ಅದರ ಬಯಕೆಯಾಗಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ‘ಸಮಾನತೆ ಜಾತ್ಯತೀತತೆ ಹಾಗೂ ನ್ಯಾಯದ ಪರವಾಗಿ ಮಾತನಾಡುವ ಸಂವಿಧಾನವು ಆರ್‌ಎಸ್‌ಎಸ್ ಅನ್ನು ಕೆರಳುವಂತೆ ಮಾಡುತ್ತದೆ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಸಂವಿಧಾನದ ಬದಲು ಮನುಸ್ಕೃತಿ ಜಾರಿಗೊಳಿಸುವ ಕುರಿತು ಕನಸು ಕಾಣುವುದನ್ನು ಆರ್‌ಎಸ್‌ಎಸ್ ನಿಲ್ಲಿಸಬೇಕು. ಅದು ಕಾರ್ಯಗತವಾಗುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ದೇಶಪ್ರೇಮಿಯಾಗಿರುವ ಪ್ರತಿಯೊಬ್ಬ ಭಾರತೀಯ ತನ್ನ ಕೊನೆಯ ಉಸಿರಿನವರೆಗೂ ಸಂವಿಧಾನ ರಕ್ಷಣೆಗೆ ಹೋರಾಡುತ್ತಾನೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.