ADVERTISEMENT

ಲೋಕಸಭೆ ಚುನಾವಣೆ ಬಳಿಕ J&K ವಿಧಾನಸಭೆ ಚುನಾವಣೆ ನಡೆಸಬೇಕು: ಆಜಾದ್‌

ಪಿಟಿಐ
Published 9 ಮಾರ್ಚ್ 2024, 13:18 IST
Last Updated 9 ಮಾರ್ಚ್ 2024, 13:18 IST
ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌   

ಶ್ರೀನಗರ: ಲೋಕಸಭೆ ಚುನಾವಣೆ ಮುಗಿದ ಕೂಡಲೇ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಆಜಾದ್‌ ಪಾರ್ಟಿ (ಡಿಪಿಎಪಿ) ನಾಯಕ ಗುಲಾಂ ನಬಿ ಆಜಾದ್‌ ಆಗ್ರಹಿಸಿದ್ದಾರೆ.

ಕಾಶ್ಮೀರದ ಚಿತ್ರರ್ಗುಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಹಲವು ವರ್ಷಗಳಿಂದ ವಿಧಾನಸಭೆ ಚುನಾವಣೆಗಾಗಿ ಕಾಯುತ್ತಿದ್ದೇವೆ. ಆದರೆ, ಕೇಂದ್ರಾಡಳಿತ ಪ್ರದೇಶದ ಜನರು ಇನ್ನು ಕಾಯಲು ಸಾಧ್ಯವಿಲ್ಲ. ಆದ್ದರಿಂದ, ಲೋಕಸಭೆ ಚುನಾವಣೆಯ ನಂತರ ವಿಧಾನಸಭೆ ಚುನಾವಣೆ ನಡೆಸಬೇಕು’ ಎಂದು ಅವರು ತಿಳಿಸಿದ್ದಾರೆ.

‘ಪೂರ್ವ ನಿಗದಿಯಂತೆ ರಾಜ್ಯಗಳಿಗೆ ಭೇಟಿ ನೀಡುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಅವರು ಇಲ್ಲಿಗೆ ಭೇಟಿ ನೀಡುವುದು ಹೊಸತೇನಲ್ಲ. ಚುನಾವಣೆ ನಿಗದಿತ ರಾಜ್ಯದಲ್ಲಿ ಒಂದು ತಿಂಗಳು ಮುಂಚಿತವಾಗಿಯೇ ಸಿದ್ಧತೆ ಪ್ರಾರಂಭಿಸುತ್ತಾರೆ. ಇದು ವಾಡಿಕೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನು ಮರುಸ್ಥಾಪಿಸಲಾಗುವುದು ಎಂದು ನಬಿ ತಿಳಿಸಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಅನಂತನಾಗ್-ರಾಜೌರಿ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿತ್ತು. ಕೇಂದ್ರದ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಜತೆಗೆ, ಶೀಘ್ರದಲ್ಲೇ ಜಮ್ಮುವಿನಲ್ಲಿ ರಾಜ್ಯತ್ವವನ್ನು ಸ್ಥಾಪಿಸುವಂತೆ ಹಾಗೂ 2024ರ ಸೆಪ್ಟೆಂಬರ್‌ 30ರೊಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.