ADVERTISEMENT

UP Election Results: ಜೈಲಿನಲ್ಲಿರುವ ಎಸ್‌ಪಿ ನಾಯಕ ಅಜಂ ಖಾನ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 6:58 IST
Last Updated 10 ಮಾರ್ಚ್ 2022, 6:58 IST
ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್
ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್   

ಲಖನೌ: ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಹಲವು ಪ್ರಕರಣಗಳಲ್ಲಿ ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಪ್ರಕಾರ, ರಾಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಜಂ ಖಾನ್ 5,090 ಮತಗಳನ್ನು ಪಡೆಯುವುದರೊಂದಿಗೆ ಬಿಜೆಪಿಯ ಆಕಾಶ್ ಸಕ್ಸೇನಾ ವಿರುದ್ಧ 4000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಎಸ್‌ಪಿ ಅಭ್ಯರ್ಥಿ ಅಜಂ ಖಾನ್ ಅವರು, ತಮ್ಮ ಮೇಲೆ ದಾಖಲಾಗಿರುವ ಹಲವು ದೂರುಗಳ ಹಿನ್ನೆಲೆಯಲ್ಲಿ ಸದ್ಯ ಸೀತಾಪುರ ಜೈಲಿನಲ್ಲಿದ್ದಾರೆ.

ಭೂ ಕಬಳಿಕೆಯೂ ಸೇರಿದಂತೆ ಖಾನ್‌ ವಿರುದ್ಧ ಉತ್ತರಪ್ರದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಾರು ದೂರುಗಳು ದಾಖಲಾಗಿದ್ದು, ಸರ್ಕಾರವೂ ‘ಭೂ ಮಾಫಿಯಾ’ಗಳ ಪಟ್ಟಿಯಲ್ಲಿ ಆಜಂ ಅವರ ಹೆಸರನ್ನು ಪ್ರಕಟಿಸಿತ್ತು.

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಟಿ, ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆಯೂ ರಾಂಪುರ ಠಾಣೆಯ ಪೊಲೀಸರು ದೂರು ದಾಖಲಿಸಿದ್ದರು. ಇದಲ್ಲದೆ ಆಜಂ ಅವರು ತಮ್ಮ ಕೃಷಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ 25ಕ್ಕೂ ಹೆಚ್ಚು ರೈತರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.

ಮಗನ ಜನನ ದಿನಾಂಕದ ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ಪತ್ನಿ ಮತ್ತು ಮಗ ಸೇರಿದಂತೆ ಖಾನ್ ಅವರನ್ನು ಫೆ.23 ರಂದು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.