ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಬೇಕು: ಫಾರೂಕ್ ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 11:21 IST
Last Updated 15 ಜನವರಿ 2023, 11:21 IST
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ   

ಶ್ರೀನಗರ: ಲೆಫ್ಟಿನೆಂಟ್ ಗವರ್ನರ್ ಆಡಳಿತದಿಂದ ಜನರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದ ಕಾರಣ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಭಾನುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಿಂದ ಮಾತ್ರ ಜನಪರ ಸರ್ಕಾರ ರಚನೆಯಾಗಲು ಸಾಧ್ಯ ಎಂದು ಹೇಳಿದರು.

ಚುನಾವಣೆಗಳು ನಡೆಯಬೇಕು. ಚುನಾವಣೆಯಿಂದ ಜನರ ಸರ್ಕಾರ ರಚನೆಯಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ಅದನ್ನು ಲೆಫ್ಟಿನೆಂಟ್ ಗವರ್ನರ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ADVERTISEMENT

ಚುನಾವಣಾ ಆಯೋಗವು ಸೋಮವಾರ ಕರೆದಿರುವ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಭೆ ಆಹ್ವಾನಿಸಲಿ. ನಮ್ಮ ಪಕ್ಷವು ಭಾಗವಹಿಸಲಿದೆ. ಅವರು ಹೇಳುವುದನ್ನು ನಾವು ಆಲಿಸುತ್ತೇವೆ. ನಮ್ಮ ನಿಲುವನ್ನು ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದರು.

2019ರಲ್ಲಿ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತ್ತು. ಬಳಿಕ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.