ADVERTISEMENT

ಚಂದ್ರನಲ್ಲಿಗೆ ಹೋಗಲು ನಾನೂ ನಿಮ್ಮೊಂದಿಗೆ ಸ್ಪರ್ಧಿಸುತ್ತೇನೆ: ಶುಭಾಂಶು ಶುಕ್ಲಾ

ಪಿಟಿಐ
Published 25 ಆಗಸ್ಟ್ 2025, 15:30 IST
Last Updated 25 ಆಗಸ್ಟ್ 2025, 15:30 IST
ಸಿಟಿ ಮಾಂಟೇಸರಿ ಶಾಲೆಯಲ್ಲಿ ಗಗನಯಾನಿ ಶುಕ್ಲಾ ಅವರಿಗೆ ಸೋಮವಾರ ಸನ್ಮಾನ ಮಾಡಲಾಯಿತು. ಪತ್ನಿ ಕನ್ಮಾ ಅವರೂ ಜೊತೆಯಲ್ಲಿದ್ದಾರೆ –ಪಿಟಿಐ ಚಿತ್ರ
ಸಿಟಿ ಮಾಂಟೇಸರಿ ಶಾಲೆಯಲ್ಲಿ ಗಗನಯಾನಿ ಶುಕ್ಲಾ ಅವರಿಗೆ ಸೋಮವಾರ ಸನ್ಮಾನ ಮಾಡಲಾಯಿತು. ಪತ್ನಿ ಕನ್ಮಾ ಅವರೂ ಜೊತೆಯಲ್ಲಿದ್ದಾರೆ –ಪಿಟಿಐ ಚಿತ್ರ   

ಲಖನೌ: ‘2040ರ ಹೊತ್ತಿಗೆ ಚಂದ್ರನ ಅಂಗಳದಲ್ಲಿ ಕಾಲಿಡುವ ಗುರಿ ನಮ್ಮ ಮುಂದಿದೆ. ಬಹುಶಃ ನಿಮ್ಮಲ್ಲಿ ಒಬ್ಬರು ಚಂದ್ರ ಮೇಲೆ ಕಾಲಿಡಬಹುದು. ಗಗನಯಾನಿ ಆಗುವುದು ಅಷ್ಟು ಸುಲಭವಲ್ಲ. ನೋಡಿ ಮತ್ತೆ, ಮುಂದೆ ನಾನು ನಿಮಗೆ ಸ್ಪರ್ಧೆ ಒಡ್ಡಲಿದ್ದೇನೆ. ಅದಕ್ಕಾಗಿಯೇ ಹೇಳುತ್ತಿದ್ದೇನೆ. ಕಠಿಣ ಪರಿಶ್ರಮ ಹಾಕಿ. ನಾವು ಒಟ್ಟಿಗೆ ಸ್ಪರ್ಧೆ ಮಾಡೋಣ. 2040ರಲ್ಲಿ ಯಾರು ಚಂದ್ರನ ಮೇಲೆ ಹೋಗುತ್ತಾರೆ ನೋಡೋಣ...’

ಹೀಗೆಂದು, ಬಾಹ್ಯಾಕಾಶ ಯಾನಕ್ಕೆ ಮಕ್ಕಳನ್ನು ಹುರಿದುಂಬಿಸಿದವರು ಗಗನಯಾನಿ ಶುಭಾಂಶು ಶುಕ್ಲಾ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ‘ಆಕ್ಸಿಯಂ–4’ ಯೋಜನೆಯನ್ನು ಪೂರ್ಣಗೊಳಿಸಿ, ವಾಪಸು ಬಂದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರು ಉತ್ತರ ಪ್ರದೇಶದ ಲಖನೌಗೆ ಶುಕ್ಲಾ ಸೋಮವಾರ ಭೇಟಿ ನೀಡಿದರು. ತಾವು ಓದಿದ ಸಿಟಿ ಮಾಂಟೇಸರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದವನ್ನೂ ನಡೆಸಿದರು.

‘ಬಾಹ್ಯಾಕಾಶ ಕೇಂದ್ರದಲ್ಲಿ ಇರುವಾಗಲೂ ಸೇರಿ ಈವರೆಗೆ ನಾನು ಮಕ್ಕಳೊಂದಿಗೆ ಮೂರು ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ನಾನು ಏನು ಮಾಡುತ್ತೇನೆ ಅಂತಾಗಲಿ, ಗಗನಯಾನಿಗಳು ಯಾವ ಕಾರ್ಯ ನಿರ್ವಹಿಸುತ್ತಾರೆ ಅಂತಾಗಲಿ ಯಾವ ಮಗುವೂ ನನ್ನ ಬಳಿ ಪ್ರಶ್ನೆ ಕೇಳಿಲ್ಲ. ಆದರೆ, ಎಲ್ಲರೂ ನೀವು ಹೇಗೆ ಗಗನಯಾನಿಯಾದಿರಿ ಎಂದು ಕೇಳುತ್ತಾರೆ’ ಎಂದರು.

ADVERTISEMENT

‘ಭವಿಷ್ಯವು ನನಗೆ ಭರವಸೆದಾಯಕವಾಗಿ ತೋರುತ್ತಿದೆ. ಬಾಹ್ಯಾಕಾಶ ಯೋಜನೆಗಳಿಗೆ ಇದೊಂದು ‘ಸುವರ್ಣಾವಕಾಶ’.  ನಮ್ಮ ಇಡೀ ಬಾಹ್ಯಾಕಾಶ ಕ್ಷೇತ್ರವೇ ಬದಲಾಗುತ್ತಿದೆ. ಯುವ ಜನಾಂಗದಲ್ಲಿ ಇರುವ ಸಾಮರ್ಥ್ಯವು ನನ್ನಲ್ಲಿ ಆಶ್ಚರ್ಯ ತರಿಸುತ್ತಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ

ಆಗಸ್ಟ್‌ 17ಕ್ಕೇ ಭೂಮಿಗೆ ವಾಪಸ್‌ ಆಗಿದ್ದರೂ ಶುಕ್ಲಾ ಅವರು ಆಗಸ್ಟ್‌ 25ಕ್ಕೆ ತಮ್ಮ ಹುಟ್ಟೂರಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭೇಟಿ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದರು. ಹುಟ್ಟೂರಿನಲ್ಲಿ ಸೋಮವಾರ ಅವರಿಗೆ ಅದ್ದೂರಿ ಸ್ವಾಗತವನ್ನೇ ಕೋರಲಾಯಿತು.

ವಿಮಾನ ನಿಲ್ದಾಣದಿಂದ ಶಾಲೆಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ತಂದೆ ತಾಯಿ ಪತ್ನಿ ಮತ್ತು ಮಗ ಸೇರಿದಂತೆ ಕುಟುಂಬಸ್ಥರು ಸ್ನೇಹಿತರೊಂದಿಗೆ ಶುಕ್ಲಾ ಅವರು ತೆರೆದ ವಾಹನದಲ್ಲಿ ಕೈಬೀಸಿದರು. ಅವರ ಮೇಲೆ ಹೂಮಳೆಗರೆಯಲಾಯಿತು. ಶಾಲಾ ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ಭಾರತ ಬಾವುಟ ಹಿಡಿದು ಸ್ವಾಗತ ಕೋರಿದರು. ಶುಕ್ಲಾ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಶುಭಾಂಶು ಶುಕ್ಲಾ ಅವರ ಹೆಸರಿನಲ್ಲಿ ರಾಜ್ಯದಲ್ಲಿ ಹೊಸ ವಿದ್ಯಾರ್ಥಿವೇತನವನ್ನು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೋಮವಾರ ಘೋಷಿಸಿದರು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.