ಮೋತಿಹರಿ(ಬಿಹಾರ): ಬಿಹಾರದಲ್ಲಿ ಶುಕ್ರವಾರ ಚುನಾವಣಾ ಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ರಾಜ್ಯವನ್ನು ಆರ್‌ಜೆಡಿ–ಕಾಂಗ್ರೆಸ್ ಕೂಟದ ದುಷ್ಟ ಉದ್ದೇಶಗಳಿಂದ ದೂರವಿಡಲು ‘ಮತ್ತೊಮ್ಮೆ ಎನ್‌ಡಿಎ ಸರ್ಕಾರ’ ಬೆಂಬಲಿಸಿ, ನಾವು ನವ ಬಿಹಾರ ನಿರ್ಮಾಣ ಮಾಡುತ್ತೇವೆ’ ಎಂದರು.
ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ಪಟ್ಟಣದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಆರ್‌ಜೆಡಿ ಉದ್ಯೋಗ ಸೃಷ್ಟಿ ಎಂಬ ಸುಳ್ಳು ಭರವಸೆ ನೀಡಿ ಬಡವರ ಜಮೀನು ಕಿತ್ತುಕೊಂಡಿದೆ. ‘ಉದ್ಯೋಗಕ್ಕಾಗಿ ಜಮೀನು’ ಹಗರಣವೇ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು. ‘ವಿಕಸಿತ್ ಬಿಹಾರ್’ ಯೋಜನೆಯು ಪೂರ್ವ ಭಾರತದ ಅಭಿವೃದ್ಧಿಯ ಕೀಲಿಕೈ ಎಂದು ಭರವಸೆ ನಿಡಿದರು.
‘ಬಿಹಾರದ ಜನರು ಆರ್‌ಜೆಡಿಯ ಸಂಕೋಲೆಯಲ್ಲಿ ಸಿಲುಕಿ ನಲುಗಿದ್ದಾರೆ. ರಾಜ್ಯದ ಯುವಜನರು ಬಿಹಾರವು ಎರಡು ದಶಕಗಳ ಹಿಂದೆ ಹತಾಶೆಯ ಕೂಪದಲ್ಲಿ ಇದ್ದಿದ್ದನ್ನು ಜ್ಞಾಪಿಸಿಕೊಳ್ಳಬೇಕು’ ಎಂದರು. ‘ಉದ್ಯೋಗಕ್ಕಾಗಿ ಜಮೀನು ಹಗರಣ’ವನ್ನು ಪ್ರಸ್ತಾಪಿಸಿದ ಅವರು, ಈ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪ್ರಮುಖ ಆರೋಪಿ ಎನ್ನುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ಬಿಹಾರದಲ್ಲಿ ಲಕ್ಷಾಂತರ ಯುವಜನರು ಸ್ವಯಂ ಉದ್ಯೋಗಕ್ಕಾಗಿ ಮುದ್ರಾ ಯೋಜನೆಯಡಿ ಸಾಲ ಪಡೆದುಕೊಂಡಿದ್ದಾರೆ. ಸರ್ಕಾರಿ ಉದ್ಯೋಗ ಸಿಗದವರಿಗೆ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ (ಮೊದಲ ಕೆಲಸ) ₹ 15 ಸಾವಿರ ಸಹಾಯಧನ ನೀಡುವ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರವು ಆ. 1ರಿಂದ ಜಾರಿಗೊಳಿಸುತ್ತಿದೆ ಎಂದರು. ಇದಕ್ಕಾಗಿ ₹1 ಲಕ್ಷ ಕೋಟಿ ಖರ್ಚು ಮಾಡಲಾಗುವುದು ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ, ನಕ್ಸಲ್ ಕಾರ್ಯಾಚರಣೆಯ ಯಶಸ್ಸನ್ನೂ ಪ್ರಧಾನಿ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.