ಅಹಮದಾಬಾದ್: ‘ಏರ್ ಇಂಡಿಯಾ’ ಪ್ರಯಾಣಿಕ ವಿಮಾನ ಟೇಕಾಫ್ ಆದ ಕೆಲ ಕ್ಷಣಗಳಲ್ಲಿಯೇ ಪತನಗೊಂಡಿತ್ತು. ಈ ದುರಂತ ನಗರದಲ್ಲಿ ಆತಂಕದ ವಾತಾವರಣ ನಿರ್ಮಿಸಿತು.
ಇಡೀ ವಿಮಾನ ಬೆಂಕಿಗೆ ಆಹುತಿಯಾಗುತ್ತಿತ್ತು. ಅದು ಬಿದ್ದಿದ್ದ ಕಟ್ಟಡಕ್ಕೂ ಬಹುತೇಕ ಹಾನಿಯಾಗಿತ್ತು. ಹಲವು ಗಂಟೆಗಳ ಬಳಿಕವೂ ದುರಂತ ಸಂಭವಿಸಿದ ಸ್ಥಳದಿಂದ ದಟ್ಟ ಹೊಗೆ ಹೊರಹೊಮ್ಮುತ್ತಿತ್ತು. ಅದು ನಗರದ ವಿವಿಧ ಭಾಗಗಳಿಗೆ ಗೋಚರಿಸುತ್ತಿತ್ತು.
ಓಡೋಡಿ ಬಂದರು:
ಈ ದೃಶ್ಯಗಳಿಂದ ಆಘಾತಕ್ಕೆ ಒಳಗಾಗಿದ್ದ ನಗರದ ಜನರು, ಸಾಧ್ಯವಾದಷ್ಟು ಜೀವಗಳನ್ನು ಉಳಿಸಲೆಂದು ಓಡೋಡಿ ಬರುತ್ತಿದ್ದದ್ದು ಕಂಡು ಬಂದಿತು ಎಂದು ಬಿಬಿಸಿ ವರದಿ ಮಾಡಿದೆ.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಮತ್ತು ಹೊಗೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದರು. ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ಹೊರತರಲು ಶ್ರಮಿಸುತ್ತಿದ್ದರು. ದುರಂತ ಸಂಭವಿಸಿದ ಪ್ರದೇಶದತ್ತ ಆಂಬುಲೆನ್ಸ್‌ಗಳು ಧಾವಿಸಿ ಬಂದವು. ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿ ರಕ್ಷಣಾ ಕಾರ್ಯಗಳಿಗೆ ಒತ್ತು ನೀಡಲಾಗಿತ್ತು.
ವಿಮಾನದಲ್ಲಿ ಲಂಡನ್‌ಗೆ ಪ್ರಯಾಣಿಸುತ್ತಿದ್ದವರ ಸಂಬಂಧಿಕರು, ವಿಷಯ ತಿಳಿದ ಕೂಡಲೇ ಸ್ಥಳದತ್ತ ಆತಂಕದಿಂದ ಧಾವಿಸಿ ಬಂದರು.
ಅಹಮದಾಬಾದ್‌ನಿಂದ ಲಂಡನ್‌ಗೆ ಗುರುವಾರ ಮಧ್ಯಾಹ್ನ ಹೊರಟಿದ್ದ ವಿಮಾನ, ಟೇಕಾಫ್ ಆದ ಕೆಲ ಕ್ಷಣಗಳಲ್ಲಿಯೇ ಪತನಗೊಂಡಿತ್ತು. ವಿಮಾನದಲ್ಲಿ ಭಾರತ, ಬ್ರಿಟನ್, ಪೋರ್ಚುಗಲ್ ಮತ್ತು ಕೆನಡದ 242 ಪ್ರಜೆಗಳು ಪ್ರಯಾಣಿಸುತ್ತಿದ್ದರು.
ಭಾರಿ ಶಬ್ದ, ಕಪ್ಪು ಹೊಗೆ:
ಗುಜರಾತಿನ ಪ್ರಮುಖ ನಗರವಾದ ಅಹಮದಾಬಾದ್‌ನ ಜನರು, ವಿಮಾನ ಪತನದ ವೇಳೆ ಭಾರಿ ಪ್ರಮಾಣದ ಶಬ್ದ ಕೇಳಿಸಿಕೊಂಡರು. ಅದರ ಬೆನ್ನಲ್ಲೇ ಆಕಾಶದಲ್ಲಿ ದಟ್ಟವಾದ ಕಪ್ಪುಹೊಗೆ ಹೊರಹೊಮ್ಮುತ್ತಿದ್ದುದನ್ನು ಗಮನಿಸಿದರು.
‘ನಾವು ಮನೆಯಲ್ಲಿದ್ದಾಗ ಭಾರಿ ಶಬ್ದ ಕೇಳಿಸಿತು. ಏನಾಗಿದೆ ಎಂದು ಹೊರಗೆ ಬಂದು ನೋಡಿದಾಗ, ಆಗಸದಲ್ಲಿ ದಟ್ಟ ಹೊಗೆ ಆವರಿಸಿತ್ತು. ಕೂಡಲೇ ದುರಂತ ಸಂಭವಿಸಿದ ಸ್ಥಳಕ್ಕೆ ಬಂದೆವು. ಅಲ್ಲೆಲ್ಲ ವಿಮಾನದ ಅವಶೇಷಗಳು, ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿದ್ದವು’ ಎಂದು ಸ್ಥಳೀಯ ನಿವಾಸಿಯೊಬ್ಬರು ಆತಂಕದಿಂದ ಹೇಳಿದರು.
ಸಾರ್ವಜನಿಕ ಆಸ್ಪತ್ರೆ ಬಳಿಯ ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ಮೇಲೆ ವಿಮಾನ ಪತನಗೊಂಡಿತ್ತು. ಈ ವೇಳೆ, ಹಾಸ್ಟೆಲ್‌ನಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದರು ಎಂಬುದರ ಸ್ಪಷ್ಟತೆಯಿಲ್ಲ. ಆದರೆ ಪ್ರತ್ಯಕ್ಷದರ್ಶಿಯ ಪ್ರಕಾರ, ದುರಂತ ಸಂಭವಿಸಿದಾಗ ಹಲವು ವಿದ್ಯಾರ್ಥಿಗಳು ತಮ್ಮ ಜೀವ ಉಳಿಸಿಕೊಳ್ಳಲು ಹಾಸ್ಟೆಲ್‌ನ ವಿವಿಧ ಮಹಡಿಗಳಿಂದ ಕೆಳಗೆ ಹಾರಿದರು.
‘ಕಟ್ಟಡದ ಮೇಲೆ ಬಿದ್ದಿದ್ದ ವಿಮಾನದಿಂದ ಬೆಂಕಿ ಬರುತ್ತಿತ್ತು. ಈ ವೇಳೆ ಹಾಸ್ಟೆಲ್‌ನ ಹಲವು ವಿದ್ಯಾರ್ಥಿಗಳನ್ನು ರಕ್ಷಿಸಿದೆವು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದೆವು’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.