ADVERTISEMENT

ಅಟಲ್ ನೆನಪಿಗೆ ₹100 ಮುಖಬೆಲೆಯ ನಾಣ್ಯ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2018, 20:06 IST
Last Updated 22 ಡಿಸೆಂಬರ್ 2018, 20:06 IST

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ವಿಶೇಷ ನಾಣ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಡಿ.24ರಂದು ಬಿಡುಗಡೆ ಮಾಡಲಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ, ಸಂಸತ್ತಿನಲ್ಲಿ ಶೀಘ್ರ ವಾಜಪೇಯಿ ಅವರ ಪ್ರತಿಮೆ ಸ್ಥಾಪಿಸಲು ಸಂಸದೀಯ ಸಮಿತಿ ಒಪ್ಪಿಕೊಂಡಿದೆ.

₹100 ಮೌಲ್ಯದ ಈ ನಾಣ್ಯವು 35 ಗ್ರಾಂ ತೂಕವಿರುತ್ತದೆ.ನಾಣ್ಯದ ಒಂದು ಬದಿಯಲ್ಲಿ ವಾಜಪೇಯಿ ಅವರ ಭಾವಚಿತ್ರವಿದ್ದು ದೇವನಾಗರಿ ಲಿಪಿಯಲ್ಲಿ ಅವರ ಹೆಸರಿರುತ್ತದೆ. ಭಾವಚಿತ್ರದ ಕೆಳಗೆ 1924– 2018 (ಜನನ–ಮರಣದ ಇಸವಿ) ಇರುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ಸಂಸತ್ತಿನಲ್ಲಿ ವಾಜಪೇಯಿ ಪುತ್ಥಳಿ: ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ವಾಜಪೇಯಿ ಅವರ ಪುತ್ಥಳಿ ಅನಾವರಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ADVERTISEMENT

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ವಾಜಪೇಯಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವವನ್ನು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ‘ಸಂಸತ್ತಿನಲ್ಲಿ ಪ್ರತಿಮೆ, ಚಿತ್ರಪಟಗಳ ಸ್ಥಾಪನೆ’ ಕುರಿತಸಂಸದೀಯ ಸಮಿತಿಯಮುಂದಿಟ್ಟರು. ಹಲವು ಪಕ್ಷಗಳ ನಾಯಕರು ಸದಸ್ಯರಾಗಿರುವ ಸಮಿತಿಯು ಅವಿರೋಧವಾಗಿ ಈ ಪ್ರಸ್ತಾವವನ್ನು ಒಪ್ಪಿಕೊಂಡಿತು ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ದೆಹಲಿಯ ಏಮ್ಸ್‌ನಲ್ಲಿ ಆಗಸ್ಟ್ 16ರಂದು ವಾಜಪೇಯಿ (93) ನಿಧನರಾಗಿದ್ದರು. 1998ರಿಂದ 2004ರವರೆಗೆ ಎನ್‌ಡಿಎ ನೇತೃತ್ವದ ಒಕ್ಕೂಟ ಮುನ್ನಡೆಸಿದ್ದ ಅವರು, ಸುವರ್ಣ ಚತುರ್ಭುಜ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ವಾಜಪೇಯಿ ಅವರ ಜನ್ಮದಿನವನ್ನು (ಡಿ.25) ಬಿಜೆಪಿ ‘ಉತ್ತಮ ಆಡಳಿತ ದಿನ’ವಾಗಿ ಆಚರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.