ADVERTISEMENT

ಸೇನಾ–ಬಿಜೆಪಿ ಸರ್ಕಾರದ ಬಗ್ಗೆ ಶಾ ವಿಶ್ವಾಸ: ಆಠವಲೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 18:49 IST
Last Updated 17 ನವೆಂಬರ್ 2019, 18:49 IST
   

ನವದೆಹಲಿ: ಮಹಾರಾಷ್ಟ್ರದಲ್ಲಿಶಿವಸೇನಾ –ಎನ್‌ಸಿಪಿ– ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆ ಪ್ರಕ್ರಿಯೆ ಬಿರುಸು ಪಡೆದಿರುವ ಮಧ್ಯೆಯೇ, ‘ಬಿಜೆಪಿ–ಶಿವಸೇನಾ ಜತೆಯಾಗಿ ಸರ್ಕಾರ ರಚಿಸಲಿವೆ ಎಂಬುದಾಗಿ ಗೃಹಸಚಿವ ಅಮಿತ್ ಶಾ ನನಗೆ ತಿಳಿಸಿದ್ದಾರೆ’ ಎಂದು ಕೇಂದ್ರ ಸಚಿವ ರಾಮದಾಸ್ ಆಠವಲೆ ಹೇಳಿಕೊಂಡಿದ್ದಾರೆ.

‘ನೀವು ಮಧ್ಯಸ್ಥಿಕೆ ವಹಿಸಿದರೆ ಯಾವುದಾದರೂ ದಾರಿ ಸಿಗುತ್ತದೆ ಎಂದು ನಾನು ಶಾ ಅವರಿಗೆ ಹೇಳಿದೆ. ಇದಕ್ಕೆ ಉತ್ತರಿಸಿದ ಅವರು, ಚಿಂತೆ ಬೇಡ. ಎಲ್ಲವೂ ಸರಿಯಾಗಲಿದೆ. ಬಿಜೆಪಿ–ಸೇನಾ ಸರ್ಕಾರ ಸದ್ಯದಲ್ಲೇ ರಚನೆಯಾಗಲಿದೆ ಎಂದು ಶಾ ಭರವಸೆ ನೀಡಿದರು’ ಎಂದು ಆಠವಲೆ ವಿವರಿಸಿದ್ದಾರೆ.

ಆಠವಲೆ ಅವರ ರಿಪಬ್ಲಿಕನ್ ಪಕ್ಷವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ.

ADVERTISEMENT

ಸೇನಾ–ಎನ್‌ಸಿಪಿ–ಕಾಂಗ್ರೆಸ್ ಮುಖಂಡರು ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಅಂತಿಮಗೊಳಿಸಿದ್ದು, ಸೋಮವಾರ ಅಥವಾ ಮಂಗಳವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ಶರದ್ ಪವಾರ್ ನಡುವಿನ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಸೋನಿಯಾ ಭೇಟಿಗೂ ಮುನ್ನ ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪವಾರ್ ಭೇಟಿಯಾಗಲಿದ್ದಾರೆ.

ಸಣ್ಣಪುಟ್ಟ ಸಮಸ್ಯೆಗಳಿಗೆ ಬೇಸರ ಬೇಡ: ಮೋದಿ

ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಬೇಸರಗೊಳ್ಳುವುದು ಬೇಡ ಎಂದು ಎನ್‌ಡಿಎ ಮಿತ್ರಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.

ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷಗಳಾದ ಎಜೆಎಸ್‌ಯು ಹಾಗೂ ಎಲ್‌ಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿರುವ ಸಂದರ್ಭದಲ್ಲಿ ಮೋದಿ ಅವರ ಹೇಳಿಕೆ ಮಹತ್ವ ಪಡೆದಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಸಮನ್ವಯ ಸಮಿತಿ ಅಗತ್ಯ ಎಂದು ಎಲ್‌ಜೆಪಿ ಪ್ರತಿಪಾದಿಸಿದೆ.

ಫಡಣವೀಸ್‌ ವಿರುದ್ಧ ಘೋಷಣೆ

ಮುಂಬೈ ವರದಿ: ಶಿವಸೇನಾ ಸ್ಥಾಪಕ ಬಾಳಾಠಾಕ್ರೆ ಅವರ ಪುಣ್ಯತಿಥಿ ನಿಮಿತ್ತ ಇಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ಗೌರವ ಸಲ್ಲಿಸಲು ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ವಿರುದ್ಧ ಶಿವಸೇನಾ ಕಾರ್ಯಕರ್ತರುಘೋಷಣೆ ಕೂಗಿ ಮುಜುಗರ ಉಂಟುಮಾಡಿದ ಪ್ರಸಂಗ ಭಾನುವಾರ ನಡೆದಿದೆ.ಸೇನಾ ಕಾರ್ಯಕರ್ತರ ಘೋಷಣೆಗಳಿಗೆ ಪ್ರತಿಕ್ರಿಯಿಸದೆ ಅವರು ಹೊರಟುಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.