ADVERTISEMENT

ಯಾರೂ ನೋಡದ ನನ್ನ ಕಣ್ಣೀರನ್ನು ಯೋಗಿ ಗಮನಿಸಿದರು: ಎಸ್‌ಪಿ ಶಾಸಕಿ ಪ್ರಶಂಸೆ

ಪಿಟಿಐ
Published 14 ಆಗಸ್ಟ್ 2025, 13:05 IST
Last Updated 14 ಆಗಸ್ಟ್ 2025, 13:05 IST
<div class="paragraphs"><p>ಪೂಜಾ ಪಾಲ್</p></div>

ಪೂಜಾ ಪಾಲ್

   

ಲಖನೌ: ಪಾತಕಿ ಅತೀಕ್ ಅಹ್ಮದ್ ಗ್ಯಾಂಗ್‌ನ ಗುಂಡಿನ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ಸಮಾಜವಾದಿ ಪಕ್ಷದ ಶಾಸಕಿ, ಪೂಜಾ ಪಾಲ್ ಅವರು, ಅಪರಾಧಿಗಳು ಮತ್ತು ಮಾಫಿಯಾಗಳನ್ನು ನಿರ್ಮೂಲನೆ ಮಾಡಲು ಶೂನ್ಯ ಸಹಿಷ್ಣುತೆ ನೀತಿಯನ್ನು ತಂದಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರುವಾರ ಶ್ಲಾಘಿಸಿದ್ದಾರೆ.

‘ವರ್ಷಗಳಿಂದ ಯಾರೂ ಗಮನಿಸದ ನನ್ನ ಕಣ್ಣೀರನ್ನು ನೋಡಿದ್ದಕ್ಕಾಗಿ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಚೈಲ್ ಕ್ಷೇತ್ರದ ಶಾಸಕಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಹೇಳಿದ್ದಾರೆ.

ADVERTISEMENT

ನನ್ನ ದುಃಖ ಮತ್ತು ನೋವಿಗೆ ಅರ್ಥ ಸಿಕ್ಕಿತು. ನ್ಯಾಯವೂ ಲಭಿಸಿತು. ಪ್ರಯಾಗರಾಜ್‌ನಲ್ಲಿ ಸಿಎಂ ಆದಿತ್ಯನಾಥ್ ಅವರ ನೇತೃತ್ವದಲ್ಲಿ ನ್ಯಾಯ ಪಡೆದ ಅನೇಕ ಕುಟುಂಬಗಳಿವೆ. ಲೆಕ್ಕವಿಲ್ಲದಷ್ಟು ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದಾರೆ. ಹಲವು ತಾಯಂದಿರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಅಪರಾಧಿಗಳು ಮತ್ತು ಅತೀಕ್ ಅಹ್ಮದ್‌ನಂತಹ ಮಾಫಿಯಾಗಳನ್ನು ನಾಶಮಾಡಲು ಶೂನ್ಯ ಸಹಿಷ್ಣುತೆ ನೀತಿಯನ್ನು ತಂದ ಮುಖ್ಯಮಂತ್ರಿಗೆ ನಾನು ಧನ್ಯವಾದ ಹೇಳುತ್ತೇನೆ’ ಎಂದು ಪೂಜಾ ಪಾಲ್ ಹೇಳಿದ್ದಾರೆ.

‘ಅತೀಕ್ ಅಹ್ಮದ್‌ನಂತಹ ಮಾಫಿಯಾವನ್ನು ಧೂಳೀಪಟ ಮಾಡಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

ಪ್ರಯಾಗರಾಜ್ ಪಶ್ಚಿಮ ಕ್ಷೇತ್ರದ ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್ ಅವರನ್ನು 2005ರ ಜನವರಿಯಲ್ಲಿ ಅವರ ಮದುವೆ ನಡೆದ ಕೆಲವೇ ದಿನಗಳಲ್ಲಿ, ಪಾತಕಿ ಅತೀಕ್ ಅಹ್ಮದ್‌ ಗ್ಯಾಂಗ್ ಗುಂಡಿನ ದಾಳಿಯಲ್ಲಿ ಕೊಂದು ಹಾಕಿತ್ತು

ಅತೀಕ್ ಅಹ್ಮದ್‌ನನ್ನು 2023ರ ಏಪ್ರಿಲ್ 15 ರಂದು ಪ್ರಯಾಗರಾಜ್‌ನಲ್ಲಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಪತ್ರಕರ್ತರಂತೆ ನಟಿಸುತ್ತಿದ್ದ ಮೂವರು ವ್ಯಕ್ತಿಗಳು ಗುಂಡು ಹಾರಿಸಿ ಕೊಂದಿದ್ದರು.

ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದಿಂದ ಪ್ರಯಾಗರಾಜ್‌ನಿಂದ ಐದು ಬಾರಿ ಶಾಸಕನಾಗಿದ್ದ. ಈ ಹತ್ಯೆ ನೇರಪ್ರಸಾರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.