ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮುಂಬೈ: ನಟ ಸೈಫ್ ಅಲಿ ಖಾನ್ ಅವರು ಚಾಕು ಇರಿತದಿಂದ ಗಾಯಗೊಂಡ ಘಟನೆಯ ಬೆನ್ನಲ್ಲೇ ವಿರೋಧ ಪಕ್ಷಗಳ ಮಹಾ ವಿಕಾಸ ಆಘಾಡಿ (ಎವಿಎ) ಮೈತ್ರಿಕೂಟವು ‘ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ’ ಎಂದು ಅರೋಪಿಸಿ ದೇವೇಂದ್ರ ಫಡಣವೀಸ್ ನೇತೃತ್ವದ ‘ಮಹಾಯುತಿ’ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
ವಿಪಕ್ಷಗಳ ಹಲವು ನಾಯಕರು ಗೃಹ ಸಚಿವರೂ ಆಗಿರುವ ಫಡಣವೀಸ್ ಅವರನ್ನು ಟೀಕಿಸಿದ್ದಾರೆ. ಇದಕ್ಕೆ, ‘ಭಾರತದ ಮೆಟ್ರೊ ನಗರಗಳಲ್ಲೇ ಮುಂಬೈ ಅತ್ಯಂತ ಸುರಕ್ಷಿತವಾದುದು’ ಎನ್ನುವ ಮೂಲಕ ಫಡಣವೀಸ್ ಅವರು ತಿರುಗೇಟು ನೀಡಿದ್ದಾರೆ.
‘ಈಗ ನಡೆದಿರುವ ಘಟನೆಯು ಗಂಭೀರವಾದುದು. ಆದರೆ, ಅದಕ್ಕಾಗಿ ಮುಂಬೈ ನಗರಕ್ಕೆ ‘ಅಸುರಕ್ಷಿತ’ ಎಂಬ ಹಣೆಪಟ್ಟಿ ಕಟ್ಟುವುದು ತಪ್ಪು. ಇಂತಹ ಘಟನೆಗಳು ಕೆಲವೊಮ್ಮೆ ನಡೆಯತ್ತವೆ ಮತ್ತು ನಾವು ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುದಕ್ಕೆ ಈ ಘಟನೆ ಹೊಸ ಉದಾಹರಣೆಯಾಗಿದೆ. ಅದೇ ಪ್ರದೇಶದಲ್ಲಿ ಈಚೆಗೆ ಕೊಲೆ ಪ್ರಕರಣ ನಡೆದಿತ್ತು. ಗೃಹ ಇಲಾಖೆಯನ್ನೂ ನೋಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಅವರು ಇತ್ತ ಗಮನಹರಿಸಬೇಕು’ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಟೀಕಿಸಿದ್ದಾರೆ.
‘ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಸೈಫ್ ಅವರು ಈಚೆಗೆ ತಮ್ಮ ಕುಟುಂಬದ ಜತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಅವರ ಜತೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದರು. ಆದರೆ, ಬುಧವಾರ ಪ್ರಧಾನಿ ಅವರು ಮುಂಬೈನಲ್ಲಿದ್ದರು. ಇದೇ ಸಮಯದಲ್ಲಿ ಸೈಫ್ ಮೇಲೆ ದಾಳಿ ನಡೆದಿದೆ’ ಎಂದು ಶಿವಸೇನಾ (ಯುಬಿಟಿ) ವಕ್ತಾರರಾಗಿರುವ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.
‘ಬಾಂದ್ರಾದಲ್ಲಿ ಒಬ್ಬ ರಾಜಕಾರಣಿಯನ್ನು (ಬಾಬಾ ಸಿದ್ದೀಕಿ) ಗುಂಡಿಟ್ಟು ಕೊಲ್ಲಲಾಯಿತು. ಒಬ್ಬ ನಟನ (ಸಲ್ಮಾನ್ ಖಾನ್) ಮನೆಯತ್ತ ಗುಂಡು ಹಾರಿಸಲಾಯಿತು. ಈಗ ಸೈಫ್ ಅವರ ಮೇಲೆ ದಾಳಿ ನಡೆದಿದೆ. ಈ ಎಲ್ಲ ದಾಳಿಗಳು ಅವರ ಮನೆ ಅಥವಾ ಕಚೇರಿಯ ಬಳಿಯೇ ನಡೆದಿವೆ. ಅಂತಹ ಖ್ಯಾತನಾಮರು ತಮ್ಮ ಮನೆ ಮತ್ತು ಕಚೇರಿಗಳಲ್ಲೇ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ಜನರು ಸುರಕ್ಷಿತವಾಗಿರುವುದು ಹೇಗೆ’ ಎಂದು ಕಾಂಗ್ರೆಸ್ ನಾಯಕಿ, ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದ ಸಂಸದೆ ವರ್ಷಾ ಗಾಯಕ್ವಾಡ್ ಪ್ರಶ್ನಿಸಿದ್ದಾರೆ.
ಸೈಫ್ ಅಲಿ ಖಾನ್ ಅವರಂತಹ ನಟರ ಮೇಲೆಯೇ ದಾಳಿ ನಡೆದರೆ ಜನಸಾಮಾನ್ಯರು ಇಲ್ಲಿ ಎಷ್ಟರ ಮಟ್ಟಿಗೆ ಸುರಕ್ಷಿತರಾಗಿದ್ದಾರೆ?ಸಂಜಯ್ ರಾವುತ್ ಶಿವಸೇನಾ (ಯುಬಿಟಿ) ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.