ಮುಂಬೈ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯನ್ನು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪವಾರ್, ‘ಇದು ನ್ಯಾಯಾಂಗದ ಮೇಲೆ ದಾಳಿ ಮಾತ್ರವಲ್ಲ. ಸಂವಿಧಾನಕ್ಕೂ ಮಾಡಿದ ಗಂಭೀರ ಅವಮಾನ’ ಎಂದು ಹೇಳಿದ್ದಾರೆ.
‘ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸವನ್ನು ನ್ಯಾಯಾಂಗ ಮಾಡುತ್ತಿದೆ. ಮುಖ್ಯ ನ್ಯಾಯಾಧೀಶರ ಮೇಲೆ ದಾಳಿ ಮಾಡುವ ಪ್ರಯತ್ನವು ನ್ಯಾಯಾಂಗದ ಮೇಲಿನ ದಾಳಿ ಮಾತ್ರವಲ್ಲ, ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಮತ್ತು ನಮ್ಮ ರಾಷ್ಟ್ರಕ್ಕೆ ಮಾಡಿದ ಗಂಭೀರ ಅವಮಾನವಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ದೇಶದಾದ್ಯಂತ ಹರಡುತ್ತಿರುವ ವಿಷವು ಈಗ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳನ್ನು ಸಹ ಗೌರವಿಸಲು ನಿರಾಕರಿಸುತ್ತಿದೆ. ಇದು ದೇಶಕ್ಕೆ ಎಚ್ಚರಿಕೆಯ ಗಂಟೆ’ ಎಂದಿದ್ದಾರೆ.
ಇಂದು(ಸೋಮವಾರ) ಸುಪ್ರೀಂ ಕೋರ್ಟ್ ಕಲಾಪದ ವೇಳೆ 71 ವರ್ಷದ ವಕೀಲರೊಬ್ಬರು ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದಾರೆ. ತಕ್ಷಣ ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ವಕೀಲನನ್ನು ತಡೆದು ಹೊರಗೆ ಹಾಕಿದ್ದಾರೆ.
ಆರೋಪಿಯನ್ನು ದೆಹಲಿಯ ಮಯೂರ್ ವಿಹಾರ್ ನಿವಾಸಿ ರಾಕೇಶ್ ಕಿಶೋರ್ ಎಂದು ಗುರುತಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.