ADVERTISEMENT

ಮಲಬಾರ್‌ ಕವಾಯತಿಗೆ ಆಸ್ಟ್ರೇಲಿಯಾ ಸೇರ್ಪಡೆ

ವಿಸ್ತರಣಾವಾದಿ ಚೀನಾಗೆ ‘ಕ್ವಾಡ್‌’ ಸಂದೇಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:40 IST
Last Updated 19 ಅಕ್ಟೋಬರ್ 2020, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಭಾರತ– ಅಮೆರಿಕ– ಜಪಾನ್‌ ಜಂಟಿ
ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ನೌಕಾಪಡೆಯೂ ಪಾಲ್ಗೊಳ್ಳುವುದಾಗಿ ಹೇಳಿದೆ. ವಿಸ್ತರಣಾ ನೀತಿ ಅನುಸರಿಸುತ್ತಿರುವ ಚೀನಾಗೆ ಈ ಮೂಲಕ ನಾಲ್ಕು ರಾಷ್ಟ್ರಗಳ ಒಕ್ಕೂಟ ‘ಕ್ವಾಡ್‌’, ಕಠಿಣ ಸಂದೇಶ ರವಾನಿಸಿದೆ.

ಹಿಂದೂ ಮಹಾಸಾಗರ ಹಾಗೂ ಅರಬ್ಬಿ ಸಮುದ್ರದಲ್ಲಿ ನಡೆಯಲಿರುವ ಸಮರಾಭ್ಯಾಸ ‘ಎಕ್ಸರ್‌ಸೈಸ್‌ ಮಲಬಾರ್‌ 2020’ರಲ್ಲಿ ಪಾಲ್ಗೊಳ್ಳುವಂತೆ ಭಾರತವು ಆಸ್ಟ್ರೇಲಿಯಾಗೆ ಆಹ್ವಾನ ನೀಡಿತ್ತು. ಎರಡು ವಾರಗಳ ಹಿಂದೆ ನಾಲ್ಕು ರಾಷ್ಟ್ರಗಳ ವಿದೇಶಾಂಗ ಸಚಿವರ ಮಟ್ಟದ ಮಾತುಕತೆ ಟೋಕಿಯೊದಲ್ಲಿ ನಡೆದಿತ್ತು. ಹಿಂದೂ ಮಹಾಸಾಗರ– ಪೆಸಿಫಿಕ್‌ ಪ್ರದೇಶದಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವುದು ಈ ಮಾತುಕತೆಯ ಉದ್ದೇಶವಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಭಾರತ– ಚೀನಾ ನಡುವೆ ಗಡಿ ಸಂಘರ್ಷ ನಡೆಯುತ್ತಿದೆ. ಇದರಿಂದಾಗಿ ಭಾರತದ ಜತೆ ಸೇರಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾ ಮುಂದಾಗಿರುವುದಕ್ಕೆ ವಿಶೇಷ ಮಹತ್ವ ಲಭಿಸಿದಂತಾಗಿದೆ.

ಕಳೆದ ಕೆಲವು ವರ್ಷಗಳಿಂದ ಸಮುದ್ರದಲ್ಲಿ ತನ್ನ ಸೇನಾ ಹಿಡಿತವನ್ನು ಚೀನಾ ಬಲಗೊಳಿಸುತ್ತಿದ್ದು, ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಚೀನಾದ ಈ ವಿಸ್ತರಣಾ ನೀತಿಯನ್ನು ತಡೆಯುವ ಸಲುವಾಗಿಯೇ ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್‌ ಸೇರಿ 2017ರಲ್ಲಿ ‘ಕ್ವಾಡ್‌’ ಕೂಟ ರಚಿಸಿಕೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.