ADVERTISEMENT

‘ಸುಳ್ಳು ಸುದ್ದಿ ತಡೆಯಲು ನಿಯಮಾವಳಿ’ ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

ಪಿಟಿಐ
Published 8 ಅಕ್ಟೋಬರ್ 2020, 12:15 IST
Last Updated 8 ಅಕ್ಟೋಬರ್ 2020, 12:15 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ನವದೆಹಲಿ: ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಅರಿವಿದೆ. ಇದಕ್ಕೆ ಕಡಿವಾಣ ಹಾಕಲು ನಿಯಮಗಳನ್ನೂ ರಚಿಸಲಾಗಿದೆ’ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷ ಭಾಷಣವನ್ನು ತೆಗೆದುಹಾಕಲು ಕೇಂದ್ರ ಸರ್ಕಾರ, ಗೂಗಲ್‌, ಫೇಸ್‌ಬುಕ್‌ ಹಾಗೂ ಟ್ವಿಟರ್‌ಗೆ ನಿರ್ದೇಶನ ನೀಡಬೇಕು’ ಎಂದು ಕೋರಿಆರ್‌ಎಸ್‌ಎಸ್‌ ಸಿದ್ಧಾಂತ ಪ್ರತಿಪಾದಕ ಕೆ.ಎನ್‌.ಗೋವಿಂದಾಚಾರ್ಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಪ್ರತಿಕ್ರಿಯೆ ನೀಡಿದೆ.

‘ಸಾಮಾಜಿಕ ಜಾಲತಾಣಗಳಲ್ಲಿ ಕಾನೂನುಬಾಹಿರ ವಿಷಯಗಳನ್ನು ಕೋರ್ಟ್ ಆದೇಶ ಅಥವಾ ಸರ್ಕಾರದ ಅಧಿಸೂಚನೆ ಮುಖಾಂತರ ತೆಗೆದುಹಾಕಬಹುದಾಗಿದೆ. ಅಲ್ಲದೆ, ಆಯಾ ವೆಬ್‌ಸೈಟ್‌ಗಳ ನೀತಿಯನ್ನು ಉಲ್ಲಂಘಿಸಿದರೆ, ಅವುಗಳ ಆಡಳಿತವೇ ಅಂತಹ ವಿಷಯವನ್ನು ತೆಗೆದುಹಾಕಬಹುದಾಗಿದೆ’ ಎಂದು ಸಚಿವಾಲಯವು ತಿಳಿಸಿದೆ.

ADVERTISEMENT

ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಫೇಸ್‌ಬುಕ್‌ನಲ್ಲಿ ಇರುವಂಥ ‘ಬಾಯ್ಸ್‌ ಲಾಕರ್‌ ರೂಮ್‌’ ಎಂಬ ಗ್ರೂಪ್‌ ಅನ್ನು ತೆಗೆದುಹಾಕಬೇಕು ಎಂದೂ ಗೋವಿಂದಾಚಾರ್ಯ ಅವರು ವಕೀಲ ವಿರಾಗ್‌ ಗುಪ್ತಾ ಅವರ ಮುಖಾಂತರ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವಾಲಯ‘ಯಾವುದೇ ವೆಬ್‌ಸೈಟ್‌ ಅಥವಾ ವಿಷಯ ನಿಷೇಧಿಸಬೇಕು ಎಂದಿದ್ದಲ್ಲಿ, ಆಯಾ ರಾಜ್ಯಗಳಲ್ಲಿನ ನಿಯೋಜಿತ ಅಧಿಕಾರಿಯಿಂದಲೇ ಇಂಥ ಮನವಿ ಬರಬೇಕು. ಬದಲಾಗಿ, ವ್ಯಕ್ತಿಯೊಬ್ಬರ ಮನವಿ ಆಧರಿಸಿ ಕ್ರಮ ಕೈಗೊಳ್ಳಲಾಗದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.