ADVERTISEMENT

ಅಯೋಧ್ಯೆ ಪ್ರಕರಣ: ‘ಬಾಬರ್ ಮಾಡಿದ್ದ ಐತಿಹಾಸಿಕ ಪ್ರಮಾದ ಸರಿಪಡಿಸಬೇಕು’

ಹಿಂದೂ ಕಕ್ಷಿದಾರರ ವಾದ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:45 IST
Last Updated 15 ಅಕ್ಟೋಬರ್ 2019, 19:45 IST
   

ನವದೆಹಲಿ: ‘ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಮಸೀದಿ ನಿರ್ಮಿಸುವ ಮೂಲಕ ಮೊಘಲ್ ದೊರೆ ಬಾಬರ್ ಮಾಡಿರುವ ಐತಿಹಾಸಿಕ ಪ್ರಮಾದವನ್ನು ಸರಿಪಡಿಸಬೇಕಿದೆ’ ಎಂದು ಹಿಂದೂ ಕಕ್ಷಿದಾರರು ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ವಾದಿಸಿದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ಎದುರು ಹಿಂದೂ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್ ಕೆ. ಪರಾಶರನ್, ‘ಅಯೋಧ್ಯೆಯಲ್ಲಿ ಹಲವು ಮಸೀದಿಗಳಿದ್ದು, ಅವುಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಬಹುದು. ಆದರೆ ರಾಮ ಹುಟ್ಟಿದ ಜಾಗವನ್ನು ಬದಲಿಸಲಾಗದು’ ಎಂದರು.

ಪರಾಶರನ್ ಅವರಿಗೆ ಕಾನೂನಿನ ಮಿತಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಪೀಠ ಕೇಳಿತು. ಅಯೋಧ್ಯೆಯ ವಿವಾದಿತ ಪ್ರದೇಶದ 2.77 ಎಕರೆ ಜಾಗದ ಮೇಲೆ ಹಕ್ಕು ಮಂಡಿಸುತ್ತಿರುವ ಮುಸ್ಲಿಮರನ್ನು ಅಲ್ಲಿಂದ ಹೇಗೆ ಹೊರ ಕಳುಹಿಸುತ್ತೀರಿ ಎಂದೂ ಪ್ರಶ್ನಿಸಿತು.

ADVERTISEMENT

‘ಒಮ್ಮೆ ಮಸೀದಿ ನಿರ್ಮಿಸಿದ ಮೇಲೆ ಅದನ್ನು ನೆಲಸಮ ಮಾಡಿದರೂ ಅದು ಮಸೀದಿಯೇ ಎಂದು ಮುಸ್ಲಿಮರು ಹೇಳುತ್ತಾರೆ. ಇದನ್ನು ನೀವು ಒಪ್ಪುತ್ತೀರಾ’ ಎಂದು ಪರಾಶರನ್ ಅವರಿಗೆ ಕೋರ್ಟ್ ಪ್ರಶ್ನಿಸಿತು. ‘ಇಲ್ಲ, ನಾನಿದನ್ನು ಒಪ್ಪುವುದಿಲ್ಲ. ಒಮ್ಮೆ ದೇವಸ್ಥಾನ ನಿರ್ಮಿಸಿದರೆ, ಎಂದಿಗೂ ಅದೂ ದೇವಸ್ಥಾನವೇ ಆಗಿರುತ್ತದೆ’ ಎಂದು ಪರಾಶರನ್ ಉತ್ತರಿಸಿದರು.

ಪರಾಶರನ್ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ ಬಳಿಕ, ‘ಧವನ್‌ ಅವರೇ, ನಾವು ಹಿಂದೂ ಕಕ್ಷಿದಾರರಿಗೆ ಸಾಕಷ್ಟು ಪ್ರಶ್ನೆಗಳಿನ್ನು ಕೇಳಿದ್ದೇವೆ ಅಲ್ಲವೇ’ ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು. ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್ ಅವರು ‘ಹಿಂದೂ ಕಕ್ಷಿದಾರರಿಗಿಂತ ಮುಸ್ಲಿಂ ಕಕ್ಷಿದಾರರಿಗೆ ಹೆಚ್ಚು ಪ್ರಶ್ನೆ ಕೇಳಲಾಗುತ್ತಿದೆ’ ಎಂದು ಸೋಮವಾರ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.