ಅಯೋಧ್ಯೆ: ನಗರದಲ್ಲಿ ಭಾನುವಾರ ಆಯೋಜಿಸಿದ್ದ ದೀಪೋತ್ಸವಕ್ಕೆ ಬಳಸಿದ್ದ ಮಣ್ಣಿನ ದೀಪಗಳನ್ನು ಪೌರಕಾರ್ಮಿಕರು ಪೊರಕೆಯಿಂದ ಗುಡಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿವೆ.
ಉರಿಯುತ್ತಿರುವ ದೀಪಗಳನ್ನು ನಂದಿಸುತ್ತಿರುವುದು, ಪೊರಕೆಯಿಂದ ಗುಡಿಸುತ್ತಿರುವುದನ್ನು ನೋಡಿ ಮನಸ್ಸಿಗೆ ನೋವಾಗಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.
'ಶ್ರೀರಾಮ ವನವಾಸದಿಂದ ಮರಳಿದ್ದರ ಸ್ಮರಣಾರ್ಥ ಜನರು ಭಕ್ತಿ, ಭಾವದಿಂದ ಸರಯೂ ನದಿ ದಡದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿದ್ದರು. ಆದರೆ, ಸ್ವಲ್ಪ ಸಮಯದಲ್ಲೇ ಅವುಗಳನ್ನು ನಂದಿಸುತ್ತಿರುವುದು, ಪೊರೆಕೆಗಳಿಂದ ಅಗೌರವದಿಂದ ಗುಡಿಸಿ ವಿಲೇವಾರಿ ಮಾಡಿರುವುದು ಹಿಂದೂಗಳ ಧಾರ್ಮಿಕ ಭಾವನೆ ಮೇಲೆ ನಡೆದ ದಾಳಿಯಾಗಿದೆ' ಎಂದು ಎಸ್‌ಪಿ ನಾಯಕ ಜೈ ಶಂಕರ್ ಪಾಂಡೆ ದೂರಿದ್ದಾರೆ.
ಸ್ಥಳೀಯರು, ವಿರೋಧ ಪಕ್ಷಗಳ ಮುಖಂಡರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅಯೋಧ್ಯೆ ಪುರಸಬೆ ಆಯುಕ್ತ ಜಯೇಂದ್ರ ಕುಮಾರ್, 'ಕೆಲವು ದೀಪಗಳು ಉರಿಯುತ್ತಿದ್ದಿರಬಹುದು. ಆದರೆ, ಬಹುತೇಕ ದೀಪಗಳು ನಂದಿದ್ದವು' ಎಂದಿದ್ದಾರೆ.
ಅಯೋಧ್ಯೆಯಲ್ಲಿ 9ನೇ ವರ್ಷದ ದೀಪೋತ್ಸವವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ ಉದ್ಘಾಟಿಸಿದ್ದರು.