ADVERTISEMENT

ರಾಮ ‘ಚಬೂತರಾ’ ಜನ್ಮಸ್ಥಾನವಲ್ಲ: ‘ಸುಪ್ರೀಂ’ನಲ್ಲಿ ಸುನ್ನಿ ವಕ್ಫ್‌ ಮಂಡಳಿ ಹೇಳಿಕೆ

ಏಜೆನ್ಸೀಸ್
Published 25 ಸೆಪ್ಟೆಂಬರ್ 2019, 10:04 IST
Last Updated 25 ಸೆಪ್ಟೆಂಬರ್ 2019, 10:04 IST
   

ನವದೆಹಲಿ:ಅಯೋಧ್ಯೆಯ ‘ರಾಮ ಚಬೂತರಾ’ವನ್ನು (ಸ್ಥಳ) ರಾಮನ ಜನ್ಮಸ್ಥಾನಎನ್ನುವ ವಾದವನ್ನು ಒಪ್ಪಿಲ್ಲ ಎಂದು ಸುನ್ನಿ ಸೆಂಟ್ರಲ್ ವಕ್ಫ್‌ ಮಂಡಳಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಆದರೆ, ಆ ಜಾಗವನ್ನು ರಾಮನ ಜನ್ಮಸ್ಥಾನ ಎಂದು ಹಿಂದುಗಳು ಆರಾಧಿಸುತ್ತಾರೆ ಎಂಬ ಫೈಜಾಬಾದ್‌ ನ್ಯಾಯಾಲಯದ 1885ರ ತೀರ್ಪನ್ನು ಪ್ರಶ್ನಿಸಿಲ್ಲ ಎಂದೂ ಹೇಳಿದೆ.

ಈ ವಿಚಾರವನ್ನು ವಕ್ಫ್‌ ಮಂಡಳಿ ಪರ ವಕೀಲ ಜಾಫರ್‌ಯಾಬ್ ಜಿಲಾನಿ ಅವರು ಮಂಗಳವಾರದ ವಿಚಾರಣೆ ವೇಳೆ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ತಿಳಿಸಿದರು.

ವಿಚಾರಣೆ ಸಂದರ್ಭ, ‘ಚಬೂತರಾ’ವನ್ನು ಜನ್ಮಸ್ಥಾನವೆಂದು ನೀವು ವಿವಾದ ಸೃಷ್ಟಿಸಬಾರದು ಎಂದು ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ಹೇಳಿದರು. ಇದಕ್ಕುತ್ತರಿಸಿದ ಜಿಲಾನಿ, ‘ಹಿಂದೆ ನಾವು ಹಾಗೆ ಮಾಡಿದ್ದೆವು. ಆದರೆ, ಆ ಜಾಗವನ್ನು ಜನ್ಮಸ್ಥಾನವೆಂದು ನಂಬಿ ಅಲ್ಲಿ ಪೂಜಿಸಲಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದರು’ ಎಂದು ಹೇಳಿದರು.

ವಿವಾದಿತ ಪ್ರದೇಶವನ್ನು ಮೂರು ಭಾಗಗಳಾಗಿ ಹಂಚಿಕೆ ಮಾಡಿ 2010ರ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.