ADVERTISEMENT

ಅಯೋಧ್ಯೆ ವಿವಾದ ಆಗಸ್ಟ್‌ 2ಕ್ಕೆ ವಿಚಾರಣೆ?

ಆಗಸ್ಟ್ 1ರೊಳಗೆ ಮಧ್ಯಸ್ಥಿಕೆ ವರದಿ ನೀಡುವಂತೆ ‘ಸುಪ್ರೀಂ’ ನಿರ್ದೇಶನ

ಪಿಟಿಐ
Published 18 ಜುಲೈ 2019, 20:00 IST
Last Updated 18 ಜುಲೈ 2019, 20:00 IST
ಹಿಂದೂಮಹಾಸಭಾ ಪರ ವಕೀಲ ಹರಿಶಂಕರ್ ಜೈನ್ ಅವರು ಅಯೋಧ್ಯೆ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ಗುರುವಾರ ಸುಪ್ರೀಂ ಕೋರ್ಟ್‌ಗೆ ಬಂದರು–ಪಿಟಿಐ ಚಿತ್ರ
ಹಿಂದೂಮಹಾಸಭಾ ಪರ ವಕೀಲ ಹರಿಶಂಕರ್ ಜೈನ್ ಅವರು ಅಯೋಧ್ಯೆ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಲು ಗುರುವಾರ ಸುಪ್ರೀಂ ಕೋರ್ಟ್‌ಗೆ ಬಂದರು–ಪಿಟಿಐ ಚಿತ್ರ   

ನವದೆಹಲಿ: ಅಯೋಧ್ಯೆಯ ವಿವಾದಿತ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಕುರಿತ ಮಧ್ಯಸ್ಥಿಕೆ ಪ್ರಕ್ರಿಯೆ ಮುಂದುವರಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಆಗಸ್ಟ್ 1ರೊಳಗೆ ಸಂಧಾನ ಫಲಿತಾಂಶದ ವರದಿ ನೀಡುವಂತೆ ಸೂಚಿಸಿದೆ.

ಮಧ್ಯಸ್ಥಿಕೆ ಸಮಿತಿ ನೀಡುವ ವರದಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಬಳಿಕ ಪ್ರಕರಣದಲ್ಲಿ ವಿಚಾರಣೆಯ ಅಗತ್ಯವಿದೆಯೇ, ಇಲ್ಲವೇ ಎಂಬ ಕುರಿತು ಆಗಸ್ಟ್ 2ರಂದು ನಿರ್ಧಾರ ತಳೆಯುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಯೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತಿಳಿಸಿತು.

ಜುಲೈ 18ರವರೆಗೆ ನಡೆದ ಸಂಧಾನ ಪ್ರಕ್ರಿಯೆಯ ಪ್ರಗತಿ ವರದಿಯನ್ನು ಅವಲೋಕಿಸಿದ ಪೀಠ, ಈ ಹಿಂದಿನ ಆದೇಶದಂತೆ ವರದಿಯ ಅಂಶಗಳು ಗೋಪ್ಯವಾಗಿರಬೇಕು ಎಂದು ತಿಳಿಸಿತು.

ADVERTISEMENT

ಜುಲೈ 31ರವರೆಗೆ ನಡೆದ ಸಂಧಾನ ಪ್ರಕ್ರಿಯೆಗಳನ್ನು ಕೋರ್ಟ್ ಗಮನಕ್ಕೆ ತರುವಂತೆ ಸಮಿತಿಗೆ ತಿಳಿಸಿದ ಪೀಠ, ಇದರಿಂದ ಮುಂದಿನ ಆದೇಶಗಳನ್ನು ನೀಡಲು ಅನುವಾಗುತ್ತದೆ ಎಂದಿತು.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ತರ್ಜುಮೆಯಲ್ಲಿ ಕೆಲವೊಂದು ವ್ಯತ್ಯಾಸಗಳಿವೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ಎಂ.ಸಿದ್ದಿಕ್ ಅವರ ದೂರನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು.

ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಖಲೀಫುಲ್ಲಾ ಅವರ ನೇತೃತ್ವದ ಸಮಿತಿ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.