ADVERTISEMENT

ಅಯೋಧ್ಯೆ: ಮಸೀದಿ ನಿರ್ಮಾಣಕ್ಕೆ ಸಿಗದ ಚಾಲನೆ

ಸುಪ್ರೀಂ ಕೋರ್ಟ್‌ ತೀರ್ಪು ಬಂದು ಆರು ವರ್ಷ ಗತಿಸಿವೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 14:37 IST
Last Updated 6 ಡಿಸೆಂಬರ್ 2025, 14:37 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

– ಐಸ್ಟಾಕ್ ಚಿತ್ರ

ಲಖನೌ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯ ಬೆಲ್ಡಾಂಗದಲ್ಲಿ ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ, ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್‌ ಕಬೀರ್‌ ದೇಶದ ಗಮನ ಸೆಳೆದಿದ್ದಾರೆ.

ADVERTISEMENT

ಆದರೆ, ರಾಮ ಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟವಾಗಿ ಆರು ವರ್ಷಗಳು ಗತಿಸಿದ್ದರೂ, ಅಯೋಧ್ಯೆ ಬಳಿಯ ಧನ್ನಿಪುರದಲ್ಲಿ ನೂತನ ಮಸೀದಿ ನಿರ್ಮಾಣಕ್ಕೆ ಚಾಲನೆಯೇ ದೊರೆತಿಲ್ಲ.

ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ, ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಬಳಿ ಮಸೀದಿ ನಿರ್ಮಾಣಕ್ಕೆ ಸುನ್ನಿ ವಕ್ಫ್‌ ಮಂಡಳಿಗೆ ಐದು ಎಕರೆ ಹಂಚಿಕೆ ಮಾಡಲಾಗಿದೆ.

ಮಸೀದಿ ನಿರ್ಮಾಣಕ್ಕೆ ಇಂಡೊ–ಇಸ್ಲಾಮಿಕ್ ಫೌಂಡೇಷನ್ ಟ್ರಸ್ಟ್‌ ಕೂಡ ರಚನೆಯಾಗಿದೆ. ಮಸೀದಿ ಸಂಕೀರ್ಣದಲ್ಲಿ ವಸ್ತುಸಂಗ್ರಹಾಲಯ, ಸಮುದಾಯ ಅಡುಗೆಮನೆ ನಿರ್ಮಿಸಲಾಗುವುದು ಎಂದೂ ಟ್ರಸ್ಟ್‌ ಘೋಷಿಸಿತ್ತು.

ಮುಸ್ಲಿಮರ ನಿರುತ್ಸಾಹ

ಧನ್ನಿಪುರದಲ್ಲಿ ನೂತನ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆಯ ಮುಸ್ಲಿಮರು ಅಷ್ಟೊಂದು ಉತ್ಸಾಹ ತೋರುತ್ತಿಲ್ಲ ಎನ್ನಲಾಗಿದೆ. ‘ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ವಿಳಂಬವಾಗುತ್ತಿರುವ ಬಗ್ಗೆ ಇಲ್ಲಿನ ಮುಸ್ಲಿಮರು ತಲೆಕೆಡಿಸಿಕೊಂಡಿಲ್ಲ’ ಎಂದು ರಾಮ ಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ಮೂಲ ದಾವೆದಾರರಾದ ಇಕ್ಬಾಲ್‌ ಅನ್ಸಾರಿ ಹೇಳುತ್ತಾರೆ.

‘ಧನ್ನಿಪುರದಲ್ಲಿ ಮಸೀದಿ ನಿರ್ಮಿಸುವ ಅಗತ್ಯವೇ ಇಲ್ಲ. ಎಲ್ಲ ಧರ್ಮದವರೂ ಪ್ರಾರ್ಥನೆ/ಪೂಜೆ ಮಾಡುವ ಸ್ಥಳಗಳು ಅಯೋಧ್ಯೆಯಲ್ಲಿಯೇ ಇವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಧನ್ನಿಪುರ ಪಟ್ಟಣ ಅಯೋಧ್ಯೆಯಿಂದ ದೂರ ಇದೆ. ಒಂದು ವೇಳೆ ಅಲ್ಲಿ ಮಸೀದಿ ನಿರ್ಮಾಣಗೊಂಡರೂ ಅಯೋಧ್ಯೆಯ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅಲ್ಲಿಗೆ ಹೋಗುವ ಸಾಧ್ಯತೆ ಕಡಿಮೆ’ ಎಂದು ಅಯೋಧ್ಯಾ ವಕ್ಫ್‌ ಸಮಿತಿಯ ಪದಾಧಿಕಾರಿಯೊಬ್ಬರು ಹೇಳುತ್ತಾರೆ. ಬಾಬರಿ ಮಸೀದಿ ಧ್ವಂಸಗೊಳಿಸಿದ್ದಕ್ಕೆ ಶನಿವಾರ 33 ವರ್ಷ ತುಂಬಿವೆ. ಈ ವೇಳೆ ಅಯೋಧ್ಯೆ ಸೇರಿದಂತೆ ಉತ್ತರ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನಗಳು ವರದಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.