ADVERTISEMENT

ಅಯೋಧ್ಯೆ: ಈವರೆಗಿನ ಮಧ್ಯಸ್ಥಿಕೆ ಫಲ ಶೂನ್ಯ

ಏಳು ದಶಕದಲ್ಲಿ ಹಲವು ಸಂಧಾನ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 10:25 IST
Last Updated 6 ನವೆಂಬರ್ 2019, 10:25 IST
ಅಯೋಧ್ಯೆ
ಅಯೋಧ್ಯೆ   

ನವದೆಹಲಿ: ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಕಳೆದ ಏಳು ದಶಕಗಳಲ್ಲಿ ಹಲವು ಪ್ರಯತ್ನಗಳು ನಡೆದಿವೆ. ನ್ಯಾಯಾಲಯದ ಸೂಚನೆಯಂತೆ ಕೆಲವು ಪ್ರಯತ್ನಗಳು ನಡೆದಿವೆ, ವ್ಯಕ್ತಿಗತ ಆಸಕ್ತಿಯಲ್ಲಿಯೂ ಕೆಲವು ಪ್ರಯತ್ನಗಳಾಗಿವೆ. ಆದರೆ, ಅವುಗಳಲ್ಲಿ ಯಾವುದಕ್ಕೂ ಯಶಸ್ಸು ದೊರೆತಿಲ್ಲ.

1990ರಲ್ಲಿ ಅಯೋಧ್ಯೆ ವಿವಾದದ ಬಗ್ಗೆ ಮಾತುಕತೆ ನಡೆಸಲು ಆಗಿನ ಪ್ರಧಾನಿ ಚಂದ್ರಶೇಖರ್ ಪ್ರಯತ್ನಿಸಿದ್ದರು. ಆದರೆ, ಅದು ವಿಫಲವಾಯಿತು. 1992ರಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್‌ ಅವರೂ ಮಧ್ಯಸ್ಥಿಕೆಗೆ ನಡೆಸಿದ ಯತ್ನಕ್ಕೆ ಯಶಸ್ಸು ದೊರೆಯಲಿಲ್ಲ.

2001ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾತುಕತೆಗೆ ಯತ್ನಿಸಿದ್ದರು. ಒಂದು ವರ್ಷದ ಬಳಿಕ, ಕಾಂಚಿ ಮಠದ ಪ್ರಭಾವಿ ಸ್ವಾಮೀಜಿ ಜಯೇಂದ್ರ ಸರಸ್ವತಿ ಅವರು ವಿಶ್ವ ಹಿಂದೂ ಪರಿಷತ್‌ ಮತ್ತು ರಾಮಜನ್ಮಭೂಮಿ ನ್ಯಾಸದಿಂದ ನ್ಯಾಯಾಲಯದ ಆದೇಶಕ್ಕೆ ಬದ್ಧ ಎಂಬ ಲಿಖಿತ ಹೇಳಿಕೆ ಪಡೆದುಕೊಂಡರು. ಆದರೆ, ಗರ್ಭಗುಡಿಯಲ್ಲಿ ಪೂಜೆಗೆ ನ್ಯಾಯಾಲಯ ಅವಕಾಶ ನೀಡದ್ದರಿಂದ ವಿಶ್ವ ಹಿಂದೂ ಪರಿಷತ್‌ ಈ ಹೇಳಿಕೆಯಿಂದ ಹಿಂದೆ ಸರಿಯಿತು.

ADVERTISEMENT

2003ರಲ್ಲಿಯೂ ಸರಸ್ವತಿ ಅವರು ಮಧ್ಯಸ್ಥಿಕೆಗೆ ಯತ್ನಿಸಿದರು. ಇದನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿಫಲಗೊಳಿಸಿತು. 2004ರಲ್ಲಿ ದಲೈಲಾಮಾ ಮಾಡಿದ ಯತ್ನವೂ ಕೈಗೂಡಲಿಲ್ಲ.

ಕಕ್ಷಿದಾರರ ವಾದ ಮಂಡನೆ ಮುಗಿದ ಬಳಿಕ 2010ರ ಆಗಸ್ಟ್‌ 3ರಂದುಅಲಹಾಬಾದ್‌ ಹೈಕೋರ್ಟ್‌ ಕೂಡ ಸಂಧಾನಕ್ಕೆ ಯತ್ನಿಸಿತ್ತು. ಈ ಪ್ರಯತ್ನವೂ ಫಲ ನೀಡಲಿಲ್ಲ.

ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸುವಂತೆ ಕೋರಿ ನಿವೃತ್ತ ಅಧಿಕಾರಿ ರಮೇಶ್‌ ಚಂದ್ರ ತ್ರಿಪಾಠಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿತ್ತು. ಪ್ರಕರಣದ ಅತ್ಯಂತ ಹಿರಿಯ ಕಕ್ಷಿದಾರ ಮೊಹಮ್ಮದ್‌ ಹಾಸಿಂ ಅನ್ಸಾರಿ ಅವರು 2015ರಲ್ಲಿ ನಡೆಸಿದ ಮಧ್ಯಸ್ಥಿಕೆ ಪ್ರಯತ್ನ ವಿಫಲವಾಯಿತು. ಶ್ರೀ ಶ್ರೀ ರವಿಶಂಕರ್‌ ಅವರೂ ಮಾತುಕತೆಯ ಪ್ರಯತ್ನ ನಡೆಸಿದ್ದರು.

ಸಂಧಾನ ಸಮಿತಿ ಬಗ್ಗೆಯೇ ಸಹಮತ ಇಲ್ಲ

ಲಖನೌ: ದಶಕಗಳಷ್ಟು ಹಳೆಯದಾದ ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ಭೂ ಒಡೆತನ ವಿವಾದಕ್ಕೆ ಸಂಧಾನದ ಮೂಲಕ ಸೌಹಾರ್ದಯುತ ಪರಿಹಾರ ಕಂಡು ಹಿಡಿಯುವ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮತ್ತು ಅಯೋಧ್ಯೆಯ ಸಾಧು–ಸಂತರ ಒಂದು ವರ್ಗ ಈ ಪ್ರಯತ್ನಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಆದರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್ ನಿರ್ಧಾರವನ್ನು ಸ್ವಾಗತಿಸಿದೆ.

‘ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಂಧಾನ ಸಮಿತಿ ಸದಸ್ಯರಿಗೆ ಅಯೋಧ್ಯೆಯ ಹಿನ್ನೆಲೆ, ಇತಿಹಾಸ ಮತ್ತು ಸಂಪ್ರದಾಯ ಗೊತ್ತಿಲ್ಲ’ ಎಂದು ರಾಮ ಜನ್ಮಭೂಮಿ ಟ್ರಸ್ಟ್‌ ಸದಸ್ಯ ಮತ್ತು ಬಿಜೆಪಿ ಮಾಜಿ ಸಂಸದ ರಾಮವಿಲಾಸ್‌ ವೇದಾಂತಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸುಪ್ರೀಂ ಕೋರ್ಟ್‌ ನಿಯೋಜಿತ ಸಂಧಾನ ಸಮಿತಿಯಲ್ಲಿ ಅಯೋಧ್ಯೆಗೆ ಪ್ರಾತಿನಿಧ್ಯ ಇಲ್ಲ’ ಎಂದು ತಾತ್ಕಾಲಿಕ ರಾಮ ಮಂದಿರದ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇಂತಹ ಪ್ರಯತ್ನಗಳು ನಿರೀಕ್ಷಿತ ಫಲ ನೀಡುವುದಿಲ್ಲ. ಇದರಿಂದ ಕೋರ್ಟ್ ತೀರ್ಪು ವಿಳಂಬವಾಗುತ್ತದೆಯಷ್ಟೇ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಪ್ರಾಮಾಣಿಕ ಸಂಧಾನ ಪ್ರಯತ್ನಗಳು ನಡೆದಲ್ಲಿ ಸೌಹಾರ್ದಯುತವಾಗಿ ವಿವಾದ ಬಗೆಹರಿಯುವಲ್ಲಿ ಸಂಶಯವಿಲ್ಲ’ ಎಂದು ಎಐಎಂಪಿಎಲ್‌ಬಿ ಸದಸ್ಯ ಮೌಲಾನಾ ಖಾಲಿದ್‌ ರಶೀದ್‌ ಫಿರಂಗಿಮಹಾಲಿ ಆಶಯ ವ್ಯಕ್ತಪಡಿಸಿದ್ದಾರೆ.

ಸಂಧಾನ ಮೂಲಕ ಸಮಸ್ಯೆ ಇತ್ಯರ್ಥ ಪಡಿಸುವ ಸುಪ್ರೀಂ ಕೋರ್ಟ್ ಪ್ರಯತ್ನವನ್ನು ಫಿರಂಗಿಮಹಾಲಿ ಸ್ವಾಗತಿಸಿದ್ದಾರೆ.

ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಂಶಕರ್‌ ಮಧ್ಯಸ್ಥಿಕೆಗೆ ವಿಶ್ವ ಹಿಂದೂ ಪರಿಷತ್‌ ನಾಯಕರು ಮತ್ತೆ ಅಪಸ್ವರ ಎತ್ತಿದ್ದಾರೆ. ಈ ಹಿಂದೆಯೂ ರವಿಶಂಕರ್‌ ಅವರ ಸಂಧಾನ ಯತ್ನಗಳಿಗೆವಿಎಚ್‌ಪಿ ತಣ್ಣೀರು ಎರಚಿತ್ತು.

ಅಯೋಧ್ಯೆ ವಿವಾದ ಬಗೆಹರಿಸುವ ಯತ್ನವಾಗಿ 2017ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ರವಿಂಶಕರ್‌ ಅವರು, ಹಿಂದೂ ಮತ್ತು ಮುಸ್ಲಿಂ ಸಮುದಾಯದ ಕಕ್ಷಿದಾರರನ್ನು ಭೇಟಿ ಮಾಡಿದ್ದರು. ಆಗ ಮುಸ್ಲಿಂ ಕಕ್ಷಿದಾರರು ಕೂಡ ‘ಇದೊಂದು ರಾಜಕೀಯ ವರಸೆ’ ಎಂದು ಆಕ್ಷೇಪ ಎತ್ತಿದ್ದರು.

‘ಇದೊಂದು ಸಂಕೀರ್ಣ ಸಮಸ್ಯೆ. ನನ್ನ ಬಳಿ ಯಾವುದೇ ಸಿದ್ಧ ಸಂಧಾನ ಸೂತ್ರ ಇಲ್ಲ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಕಕ್ಷಿದಾರರ ಜತೆ ಚರ್ಚಿಸಿ ಅವರ ಅಭಿಪ್ರಾಯ ತಿಳಿಯುವ ಪ್ರಯತ್ನವಷ್ಟೇ’ ಎಂದು ರವಿಶಂಕರ್ ಹೇಳಿದ್ದರು.

ವಿಎಚ್‌ಪಿ ನಾಯಕರು ಮತ್ತು ಮುಸ್ಲಿಂ ಕಕ್ಷಿದಾರರು ರವಿಶಂಕರ್‌ ಅವರ ಸಂಧಾನ ಯತ್ನಗಳಿಂದ ದೂರ ಉಳಿದಿದ್ದರು. ಮುಸ್ಲಿಂ ಕಕ್ಷಿದಾರರಾದ ಇಕ್ಬಾಲ್‌ ಅನ್ಸಾರಿ ಕೂಡ ‘ಇದೊಂದು ರಾಜಕೀಯ ಕಸರತ್ತು’ ಎಂದು ಹೀಯಾಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.