ADVERTISEMENT

ಅಯೋಧ್ಯೆ ರಾಮಮಂದಿರ ಭೂಮಿಪೂಜೆ: ಪೂಜಾ ಕಾರ್ಯಗಳು ವಿಳಂಬ

ಕೊರೊನಾದಿಂದ ಸಚಿವೆ ಮೃತಪಟ್ಟ ಕಾರಣ ಯೋಗಿ ಆದಿತ್ಯನಾಥ್ ಭೇಟಿ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2020, 1:44 IST
Last Updated 3 ಆಗಸ್ಟ್ 2020, 1:44 IST
ಅಯೋಧ್ಯೆಯಲ್ಲಿ ಕೆತ್ತನೆ ಕಾರ್ಯ ಪೂರ್ಣಗೊಂಡಿರುವ ಶಿಲೆಗಳು
ಅಯೋಧ್ಯೆಯಲ್ಲಿ ಕೆತ್ತನೆ ಕಾರ್ಯ ಪೂರ್ಣಗೊಂಡಿರುವ ಶಿಲೆಗಳು   

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಪೂಜಾ ಕಾರ್ಯಗಳು ವಿಳಂಬವಾಗಿವೆ. ಇಂದು (ಸೋಮವಾರ) ನಡೆಯಬೇಕಿದ್ದ ‘ನಿಶಾನ್ ಪೂಜೆ’ ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ರಾಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ ತಿಳಿಸಿರುವುದಾಗಿ ‘ಝೀ ನ್ಯೂಸ್’ ವರದಿ ಮಾಡಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿ ಹಠಾತ್ ಮುಂದೂಡಿಕೆಯಾಗಿರುವುದರಿಂದ ಪೂಜೆಯನ್ನೂ ಮುಂದಕ್ಕೆ ಹಾಕಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

‘ಭಗವಾನ್ ರಾಮನಿಗೆ ಸಂಬಂಧಿಸಿ ಏನೇ ಕೆಲಸ ಆರಂಭಿಸುವುದಿದ್ದರೂ ಅದಕ್ಕೂ ಮುನ್ನ ‘ಹನುಮಾನ್‌’ಗೆ ನಿಶಾನ್ ಪೂಜೆ ಸಲ್ಲಿಸಬೇಕೆಂಬ ನಂಬಿಕೆ ಭಕ್ತರಲ್ಲಿ ಬಲವಾಗಿದೆ. ಹೀಗಾಗಿ ರಾಮಮಂದಿರ ನಿರ್ಮಾಣದಲ್ಲಿ ಇದು ಬಹಳ ಮುಖ್ಯ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶದ ಸಚಿವೆ ಕಮಲಾ ರಾಣಿ ವರುಣ್ ಅವರು ಕೊರೊನಾ ವೈರಸ್ ಸೋಂಕಿನಿಂದಾಗಿ ಭಾನುವಾರ ಮೃತಪಟ್ಟಿದ್ದರು. ಹೀಗಾಗಿ ಯೋಗಿ ಆದಿತ್ಯನಾಥ್ ಅವರ ಅಯೋಧ್ಯೆ ಭೇಟಿ ಮುಂದೂಡಲಾಗಿತ್ತು.

ಈ ಮಧ್ಯೆ, ರಾಮಮಂದಿರ ಭೂಮಿಪೂಜೆಗೆ ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.